ಧಾರವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ವಿಳಂಬ: ಡಿಸಿ ಹೇಳಿದ್ದೇನು? - ಈಟಿವಿ ಭಾರತ ಕರ್ನಾಟಕ
Published : Sep 5, 2023, 10:11 PM IST
ಧಾರವಾಡ: ರಾಜ್ಯದಲ್ಲಿ ಮುಂಗಾರು ಮಳೆ ಅಭಾವದಿಂದ ಕೆಲವೆಡೆ ಬೆಳೆ ನಾಶವಾಗಿದೆ. ಇದರಿಂದ ಕೆಲ ರೈತರು ಆತ್ಮಹತ್ಯೆ ಶರಣಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಬರಗಾಲದ ಪರಿಸ್ಥಿತಿ ಇದೆ. ಜಿಲ್ಲಾದ್ಯಂತ ಈಗಾಗಲೇ 11 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಯಾರೊಬ್ಬ ರೈತ ಕುಟುಂಬಕ್ಕೂ ಇನ್ನು ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಳೆದ ಎರಡು ತಿಂಗಳ ಹಿಂದೆ ತಾಲೂಕಿನ ಕವಲಗೇರಿ ಗ್ರಾಮದ ಬಸವರಾಜ ತೋಟಗೇರ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಬಳಿಕ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಮೃತ ರೈತನ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದರು.
ಮೃತ ಬಸವರಾಜ ತೋಟಗೇರಿ ಎಂಬ ರೈತ ಕೆವಿಜಿ ಮತ್ತು ಕೆನರಾ ಬ್ಯಾಂಕ್‌ನಲ್ಲಿ ತಲಾ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಮೂರೂವರೆ ಎಕರೆಯಲ್ಲಿ ಕೃಷಿ ಮಾಡುತ್ತಿದ್ದ ಬಸವರಾಜ್ ಇದರ ಜೊತೆಗೆ ಹೆಚ್ಚುವರಿ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು. ಸದ್ಯ ಅವರ ಮರಣದ ನಂತರ ಕುಟುಂಬ ತೀರಾ ಸಂಕಷ್ಟ ಸಿಲುಕಿದೆ. ಮೃತರಿಗೆ ಪತ್ನಿ, ವೃದ್ಧ ತಂದೆ, ಮೂವರು ಮಕ್ಕಳಿದ್ದಾರೆ. ಈಗ ಮಗಳ ಶಿಕ್ಷಣ ಕೂಡ ಅರ್ಧಕ್ಕೆ ನಿಂತಿದೆ. ಈ ಕುರಿತು ಮೃತ ರೈತನ ಪತ್ನಿ ಕಸ್ತೂರಿ ಮಾತನಾಡಿ, ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡು ಎರಡು ತಿಂಗಳಾದರೂ ಪರಿಹಾರ ಸಿಕ್ಕಿಲ್ಲ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ಈ ಕುರಿತು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಆರು ತಿಂಗಳ ಅವಧಿಯಲ್ಲಿ ಸುಮಾರು 11 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಒಂದು ಕಮೀಟಿ ಇರುತ್ತದೆ. ಅದರಲ್ಲಿ ನೈಜತೆಯನ್ನು, ಸಾಲ ವಿವರ, ಯಾವ ಕಾರಣಕ್ಕೆ ಮೃತಪಟ್ಟರು ಎಂಬ ವಿಷಯದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ನಂತರ ನೈಜತೆ ಆಧರಿಸಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ಕೊಡುತ್ತೇವೆ ಎಂದರು.
ಇದನ್ನೂ ಓದಿ:ತಪ್ಪಾದ ಔಷಧಿ ಸಿಂಪಡಣೆ: ಕಣ್ಣೆದುರೇ ಕಮರಿದ 4 ಎಕರೆ ದ್ರಾಕ್ಷಿ ಬೆಳೆ, ಆತ್ಮಹತ್ಯೆಗೆ ಶರಣಾದ ರೈತ