ಪರೀಕ್ಷೆ ಮುಗಿಸಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯರಿಗೆ ಬೈಕ್ ಡಿಕ್ಕಿ.. ಯುವತಿ ಸಾವು, ಮತ್ತೊಬ್ಬಳ ಸ್ಥಿತಿ ಗಂಭೀರ - ಎನನೆಲ್ಲೂರು ನಿವಾಸಿ ಅನ್ಸನ್ ರಾಯ್
ಎರ್ನಾಕುಲಂ, ಕೇರಳ:ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಬ್ಬರು ವಿದ್ಯಾರ್ಥಿನಿಯರು ರಸ್ತೆ ದಾಟುತ್ತಿದ್ದ ವೇಳೆ ಅತಿವೇಗವಾಗಿ ಬಂದ ಬೈಕ್ವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿನಿಗಳ ಪೈಕಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಘಟನೆ ಜಿಲ್ಲೆಯ ಮುವಾಟ್ಟುಪುಳದ ಕಾಲೇಜು ಮುಂಭಾಗ ನಡೆದಿದೆ.
ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿಯೊಬ್ಬಳು ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿ ವಿರುದ್ಧ ಅನೈಚ್ಛಿಕ ಕೊಲೆ ಆರೋಪ ಹೊರಿಸಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಎನನೆಲ್ಲೂರು ನಿವಾಸಿ ಅನ್ಸನ್ ರಾಯ್ (22) ಎಂಬಾತನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ತನಿಖೆಯ ಪ್ರಕಾರ, ಈತ ಸಾಮಾನ್ಯ ಬೈಕ್ ಸವಾರನಾಗಿದ್ದು, ಅತಿಯಾದ ವೇಗದಲ್ಲಿ ಅಪಾಯಕಾರಿಯಾಗಿ ಸವಾರಿ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಮೋಟಾರು ವಾಹನ ಇಲಾಖೆ ಕೂಡ ಅನ್ಸನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಅವರ ಪರವಾನಗಿ ರದ್ದುಪಡಿಸಲಾಗುವುದು ಎಂದು ಮೋಟಾರು ವಾಹನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಳಕಂ ಕುನ್ನೈಕ್ಕಲ್ ಮೂಲದ ಆರ್ ನಮಿತಾ (20) ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಪರೀಕ್ಷೆ ಮುಗಿಸಿ ಕಾಲೇಜಿನಿಂದ ಬರುತ್ತಿದ್ದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ರಸ್ತೆ ದಾಟುತ್ತಿದ್ದರು. ಈ ವೇಳೆ, ಮುವಾಟ್ಟುಪುಳ ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 20 ವರ್ಷದ ನಮಿತಾ ಮತ್ತು ಅನುಶ್ರೀ ಗಂಭೀರವಾಗಿ ಗಾಯಗೊಂಡಿದ್ದು, ಅವರಿಬ್ಬರನ್ನು ಸಹಪಾಠಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಸಹಿತ ನಮಿತಾ ಬದುಕುಳಿಯಲಿಲ್ಲ. ಆದರೆ ಅನುಶ್ರೀ ರಾಜಿ ನಿರ್ಮಲಾ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬೈಕ್ ಚಲಾಯಿಸುತ್ತಿದ್ದ ಅನ್ಸನ್ ಸಮೀಪದಲ್ಲೇ ನಿಂತಿದ್ದ ಬಸ್ ಕೆಳಗೆ ಬಿದ್ದಿದ್ದಾನೆ. ವಿದ್ಯಾರ್ಥಿಗಳೂ ಆತನನ್ನು ಸಹ ಆಸ್ಪತ್ರೆಗೆ ಕರೆತಂದರು. ಅಪಘಾತಕ್ಕೂ ಮುನ್ನ ಈತ ರಸ್ತೆಯಲ್ಲಿ ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅನ್ಸನ್ ಅವರನ್ನು ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸುವಾಗ ನಿರ್ಮಲಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸಹಪಾಠಿಗಳಿಗೆ ಡಿಕ್ಕಿ ಹೊಡೆದ ಆರೋಪಿಯನ್ನು ಕರೆದುಕೊಂಡು ಹೋಗಲು ಬಿಡುವುದಿಲ್ಲ ಎಂಬುದು ವಿದ್ಯಾರ್ಥಿಗಳ ನಿಲುವಾಗಿತ್ತು. ನಂತರ ಪೊಲೀಸರು ಆಗಮಿಸಿ ಭದ್ರತೆ ನೀಡಿದ ಬಳಿಕ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಯಿತು. ಇದೇ ವೇಳೆ ನಮಿತಾ ಮೃತದೇಹವನ್ನು ನಿರ್ಮಲಾ ಆಸ್ಪತ್ರೆಯಿಂದ ತಾಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿಯಿತು.
ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆಯ ನಂತರ ಮಧ್ಯಾಹ್ನ 12 ಗಂಟೆಗೆ ಕಾಲೇಜಿನ ಆವರಣದಲ್ಲಿ ನಮಿತಾಳ ಪಾರ್ಥಿವ ಶರೀರದ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಬಳಿಕ ಮಧ್ಯಾಹ್ನದ ವೇಳೆ ನಮಿತಾಳ ಮೃತದೇಹವನ್ನು ಕುಟುಂಬಸ್ಥರು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದರು. ಬಳಿಕ ಮುವಾಟ್ಟುಪುಳ ಪುರಸಭೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿದರು.
ಓದಿ:ಲಂಡನ್ನಲ್ಲಿ ಭೀಕರ ರಸ್ತೆ ಅಪಘಾತ: ಆಂಧ್ರ ಪ್ರದೇಶದ ವಿದ್ಯಾರ್ಥಿ ಸಾವು