ಬೆಳಗಾವಿ: ಬೀರೇಶ್ವರ ಜಾತ್ರೆಯ ಕಣ್ಮನ ಸೆಳೆದ ತೆಂಗಿನಕಾಯಿ ಅರ್ಪಣೆ - ETV Bharat Karnataka
ಚಿಕ್ಕೋಡಿ(ಬೆಳಗಾವಿ):ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಜಾತ್ರೆ ಅದ್ದೂರಿಯಾಗಿ ನೆರವೇರಿತು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವ ನಡೆದಿದ್ದು ತೆಂಗಿನಕಾಯಿ, ಉತ್ತತ್ತಿ, ಭಂಡಾರ ಎರಚಿ ಭಕ್ತರು ತಮ್ಮ ಹರಕೆಗಳನ್ನ ಪೂರೈಸಿ ಬಂಡಾರ ಒಡೆಯ ಬೀರೇಶ್ವರನಿಗೆ ಶರಣು ಹೋದರು.
ಇನ್ನು ಹರಕೆ ಹೊತ್ತಿದ್ದ ಭಕ್ತರು ಪಲ್ಲಕ್ಕಿ ಮೆರವಣಿಗೆ ವೇಳೆ ದೇವಸ್ಥಾನದ ಮುಖ್ಯ ದ್ವಾರಕ್ಕೆ ತೆಂಗಿನಕಾಯಿ ಎಸೆದು ಹರಕೆ ಸಲ್ಲಿಸುವುದು ವಾಡಿಕೆಯಾಗಿದೆ. ಅದರಂತೆ ಸಾಯಂಕಾಲ 5 ರಿಂದ 7 ಗಂಟೆಯವರೆಗೆ ಭಕ್ತರು ಸತತವಾಗಿ ಮಂದಿರದ ಮುಖ್ಯ ದ್ವಾರಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಎಸೆದು ಹರಕೆ ಸಲ್ಲಿಸಿದರು. ಅರಿಶಿನ ಭಂಡಾರ, ಕೆಂಪು ಗುಲಾಲು ಹಾರಿಸಿ ಮೈಗೆ ಎರಚಿಕೊಂಡು ಭಕ್ತರು ಕುಣಿದು ಕುಪ್ಪಳಿಸಿದರು.
ಈ ಜಾತ್ರೆಯಲ್ಲಿ ನೂರಕ್ಕೂ ಹೆಚ್ಚು ನಂದಿಕೋಲು ಪಲ್ಲಕ್ಕಿಗಳು, 50 ಕ್ಕೂ ಹೆಚ್ಚು ಅಡ್ಡ ಪಲ್ಲಕ್ಕಿಗಳು ಪಾಲ್ಗೊಂಡಿದ್ದವು. ಶ್ರೀ ಬೀರೇಶ್ವರ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಜನಮನ ಸೆಳೆಯಿತು. ಈ ಉತ್ಸವದಲ್ಲಿ ಜನರು ಅತ್ಯಂತ ಭಕ್ತಿಯಿಂದ ಭಂಡಾರ ಹಾರಿಸಿ, ಉತ್ತತ್ತಿ, ತೆಂಗಿನಕಾಯಿಗಳನ್ನು ಪಲ್ಲಕ್ಕಿ ಮೇಲೆ ಎಸೆದು ಪೂಜೆ ಸಲ್ಲಿಸಿದರು. ಡೊಳ್ಳು ಕುಣಿತ, ವಿವಿಧ ವಾಧ್ಯಮೇಳಗಳು ಉತ್ಸವಕ್ಕೆ ಮೇರಗು ತಂದವು. ರಾತ್ರಿವಿಡಿ ಡೊಳ್ಳಿನ ಗಾಯನ ಕಾರ್ಯಕ್ರಮ ಕೂಡ ನಡೆಯಿತು.
ಇದನ್ನೂ ಓದಿ :ಬೆಳಗಾವಿ: ಸುಟ್ಟು ಕರಕಲಾದ ತೆಂಗಿನ ಕಾಯಿ ತುಂಬಿದ್ದ ಲಾರಿ