ಸುತ್ತೂರು ಶಾಖಾ ಮಠಕ್ಕೆ ಸಿಎಂ ಭೇಟಿ; 'ವಿಶೇಷ ಏನೂ ಇಲ್ಲ' ಎಂದ ಸಿದ್ದರಾಮಯ್ಯ
Published : Nov 15, 2023, 7:58 PM IST
ಬೆಂಗಳೂರು :ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಂಗಳೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಕುಶಲೋಪರಿ ವಿಚಾರಿಸಿದರು. ಬನಶಂಕರಿಯಲ್ಲಿನ ಸುತ್ತೂರು ಶಾಖಾ ಮಠಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಶ್ರೀಗಳು ಆತ್ಮೀಯವಾಗಿ ಬರಮಾಡಿಕೊಂಡರು. ಸ್ವಲ್ಪ ಹೊತ್ತು ಶ್ರೀಗಳ ಜೊತೆ ಚರ್ಚಿಸಿದ ಬಳಿಕ ಸಿಎಂ ಅಲ್ಲಿಂದ ತೆರಳಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ''ಭೇಟಿಯಲ್ಲಿ ವಿಶೇಷ ಏನೂ ಇಲ್ಲ. ಸುಮ್ಮನೆ ಬಂದಿದ್ದೆ, ಊಟಕ್ಕೆ ಕರೆದಿದ್ದರು. ಶ್ರೀಗಳ ಜೊತೆ ರಾಜಕೀಯ ಮಾತನಾಡಲು ಆಗುತ್ತಾ?'' ಎಂದು ಪ್ರಶ್ನಿಸಿದರು.
ಸಂಸದ ಪ್ರತಾಪ್ ಸಿಂಹ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ''ಸಂಸದ ಪ್ರತಾಪ್ ಸಿಂಹ ಬರೀ ಸುಳ್ಳು ಹೇಳುತ್ತಾರೆ. ಅವರಿಗೆ ಏನೂ ಗೊತ್ತಿಲ್ಲ. ಬೆಂಗಳೂರು- ಮೈಸೂರು ರಸ್ತೆ ನಾನೇ ಮಾಡಿಸಿದ್ದು ಎನ್ನುತ್ತಾರೆ'' ಎಂದು ಟೀಕಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸರ್ಕಾರದ ಬಗ್ಗೆ ನಡೆಸಿರುವ ವಾಗ್ದಾಳಿ ಬಗ್ಗೆ ಕೇಳಿದ ಪ್ರಶ್ನೆಗೆ, ''ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏನು ಹೇಳಿದ್ದಾರೆ ಎಂದು ಗಮನಿಸಲಿ'' ಎಂದು ತಿರುಗೇಟು ನೀಡಿದರು. ಈ ವೇಳೆ ಸಚಿವ ಹೆಚ್ ಸಿ ಮಹದೇವಪ್ಪ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ:ಜೆಡಿಎಸ್ ಸ್ವರೂಪದಲ್ಲಿ ರಾಜಕೀಯ ಪಕ್ಷವೇ ಅಲ್ಲ, ಅದು ಕುಟುಂಬಕ್ಕೆ ಸೀಮಿತ : ಸಿಎಂ ಸಿದ್ದರಾಮಯ್ಯ