68ನೇ ಕರ್ನಾಟಕ ರಾಜ್ಯೋತ್ಸವ: ಕಂಠೀರವ ಸ್ಟೇಡಿಯಂನಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
Published : Nov 1, 2023, 10:23 AM IST
|Updated : Nov 1, 2023, 11:58 AM IST
ಬೆಂಗಳೂರು: ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ನಗರದ ಕಂಠೀರವ ಸ್ಟೇಡಿಯಂನಲ್ಲಿ ಇಂದು ಹಮ್ಮಿಕೊಂಡಿರುವ 68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಕ್ರೀಡಾಂಗಣದ ಸುತ್ತಮುತ್ತಲಿನ ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಹೇರಿದ್ದಾರೆ. ಸಮಾರಂಭಕ್ಕೆ ಅನೇಕ ಮಂದಿ ಆಗಮಿಸಿರುವುದರಿಂದ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ವಹಿಸಿದ್ದು, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರ್, ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಎಂ.ಚಂದ್ರಶೇಖರ್ ಮತ್ತು ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಪ್ರೀತಿಯ ನಾಡಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ. 1973 ರ ನವೆಂಬರ್ 1 ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇಂದಿಗೆ 50 ವಸಂತಗಳು ಸಂದಿವೆ. ಕರ್ನಾಟಕದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಕನ್ನಡ ನಾಡಭಾಷೆಯಷ್ಟೇ ಆಗದೆ ನಾಡಿನ ಪ್ರತಿ ಮನೆಯ ಆಡು ಭಾಷೆಯಾಗಲಿ, ಈ ದಿನ ಕನ್ನಡಿಗರ ಪಾಲಿನ ನಿತ್ಯೋತ್ಸವವಾಗಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕರುನಾಡಿಗೆ 50ರ ಸಂಭ್ರಮ: 21 ಕೋಟಿಯಿಂದ 3.27 ಲಕ್ಷ ಕೋಟಿವರೆಗಿನ ವಿಕಾಸದ ರಾಜ್ಯ ಬಜೆಟ್ ಇತಿಹಾಸ