ಹಂಪಿಯಲ್ಲಿ ವೀರ ಮಕ್ಕಳ ಕುಣಿತಕ್ಕೆ ಸಿಎಂ ಸಿದ್ದರಾಮಯ್ಯ ಭರ್ಜರಿ ಸ್ಟೆಪ್ಸ್: ವಿಡಿಯೋ
Published : Nov 2, 2023, 10:10 PM IST
|Updated : Nov 2, 2023, 10:35 PM IST
ವಿಜಯನಗರ :ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವೀರ ಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು.
ಐತಿಹಾಸಿಕ ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನ ಹುಂಡಿಯ ವೀರ ಮಕ್ಕಳ ಕುಣಿತ ನಡೆಯಿತು. ಈ ವೇಳೆ ನೃತ್ಯಗಾರರಿಗೆ ಸಾಥ್ ನೀಡಿದ ಸಿಎಂ, ಕೆಲ ನಿಮಿಷಗಳ ಕಾಲ ಸ್ಟೆಪ್ ಹಾಕಿದರು. ಸಿಎಂ ನೃತ್ಯವನ್ನು ಕಾರ್ಯಕ್ರಮದಲ್ಲಿ ನೆರೆದವರು ಎಂಜಾಯ್ ಮಾಡಿದರು. ಸಿದ್ದರಾಮಯ್ಯ ಕುಣಿಯುತ್ತಿರುವಾಗ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಕೂಡ ಶಿಳ್ಳೆ ಹೊಡೆದು ಹುರಿದುಂಬಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಕರ್ನಾಟಕ ಸಂಭ್ರಮ-50’ ಹೆಸರಿನಲ್ಲಿ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದೆ. ಇದರ ಹಿನ್ನೆಲೆಯಲ್ಲಿ ಇಂದು ಹಂಪಿಯಲ್ಲಿ ಕರುನಾಡಿನ ಜ್ಯೋತಿ ರಥಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ:"5 ವರ್ಷ ನಮ್ಮದೇ ಸರ್ಕಾರ, ನಾನೇ ಮುಂದುವರೆಯುವೆ": ವಿಜಯನಗರದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ