ಮೂತ್ರ ವಿಸರ್ಜನೆ ಪ್ರಕರಣ: ಸಂತ್ರಸ್ತ ವ್ಯಕ್ತಿಯ ಪಾದ ತೊಳೆದು, ಕ್ಷಮೆ ಕೇಳಿದ ಮಧ್ಯಪ್ರದೇಶ ಸಿಎಂ: ವಿಡಿಯೋ - ಸಿಎಂ ಶಿವರಾಜ ಸಿಂಗ್ ಚೌಹಾಣ್
ಭೋಪಾಲ್ (ಮಧ್ಯಪ್ರದೇಶ):ಚುನಾವಣೆಯ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ಮಾಡಿರುವ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ ಬೆನ್ನಲ್ಲೇ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಸಂತ್ರಸ್ತ ವ್ಯಕ್ತಿಯನ್ನು ಸಿಎಂ ನಿವಾಸಕ್ಕೆ ಕರೆಯಿಸಿಕೊಂಡು ಪಾದಪೂಜೆ ಮಾಡಿ, ಕ್ಷಮೆ ಕೋರಿ, ಗೌರವಿಸಿ ರಕ್ಷಣೆಯ ಅಭಯ ನೀಡಿದ್ದಾರೆ.
ಸಿದ್ಧಿ ಸಮುದಾಯದ ವ್ಯಕ್ತಿಯ ಮೇಲೆ ಆರೋಪಿ ಪ್ರವೇಶ್ ಶುಕ್ಲಾ ರಾವತ್ ಎಂಬಾತ ಮೂತ್ರ ವಿಸರ್ಜನೆ ಮಾಡಿದ್ದಾನೆಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಕೋಲಾಹಲ ಎಬ್ಬಿಸಿತ್ತು. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಆರೋಪಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೇ, ಆತನ ಮನೆಯನ್ನೂ ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ.
ಇದೇ ಹೊತ್ತಿನಲ್ಲಿ ತನ್ನ ಮೇಲೆ ಯಾರೂ ಮೂತ್ರ ವಿಸರ್ಜನೆ ಮಾಡಿಲ್ಲ. ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ ಎಂದು ಸಂತ್ರಸ್ತ ಸ್ಥಾನದಲ್ಲಿರುವ ವ್ಯಕ್ತಿಯೇ ಹೇಳಿಕೆ ನೀಡಿದ್ದ. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಇದೀಗ ಸಿಎಂ ಅದೇ ವ್ಯಕ್ತಿಯ ಕಾಲು ತೊಳೆದು ಪೂಜೆ ಮಾಡಿ, ಕಾಣಿಕೆ ನೀಡಿ ಗೌರವಿಸಿದ್ದಾರೆ.
ಬಳಿಕ ಆತನ ಜೊತೆಗೆ ಮಾತನಾಡಿದ್ದು, "ವಿಡಿಯೋ ನೋಡಿ ಮನಸ್ಸಿಗೆ ಖೇದವಾಯಿತು. ಇಂತಹ ಘಟನೆಗಳು ನಡೆಯಬಾರದು. ಜನರೇ ನಮಗೆ ದೇವರು. ನಿಮ್ಮ ರಕ್ಷಣೆಯ ಹೊಣೆ ಸರ್ಕಾರದ್ದು" ಎಂದು ಸಾಂತ್ವನ ಹೇಳಿದ್ದಾರೆ. "ಘಟನೆ ಕುರಿತಂತೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ" ಎಂದೂ ಹೇಳಿದ್ದಾರೆ.
ಇದನ್ನೂ ಓದಿ:ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ.. ಆರೋಪಿ ಪ್ರವೇಶ್ ಶುಕ್ಲಾ ಬಂಧನ, ಮನೆ ನೆಲಸಮ!