ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿಎಂ ಭೇಟಿ; ಸಚಿವ ಅಂಗಾರ ಮುನಿಸು ಬಹಿರಂಗ
ಸುಬ್ರಹ್ಮಣ್ಯ:ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ ದೇವರ ದರ್ಶನ ಪಡೆದರು. ಧರ್ಮಸ್ಥಳದಿಂದ ಕಡಬದ ಬಿಳಿನೆಲೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಿಎಂ ಅಲ್ಲಿಂದ ಸುಬ್ರಹ್ಮಣ್ಯಕ್ಕೆ ತೆರಳಿದರು. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕುಕ್ಕೆಗೆ ಮುಖ್ಯಮಂತ್ರಿಗಳು ಆಗಮಿಸಿದ ವೇಳೆ ಮಳೆ ಸುರಿಯಿತು. ಈಗಾಗಲೇ ಪಕ್ಷದ ಬಗ್ಗೆ ಮುನಿಸಿಕೊಂಡಿರುವ ಸುಳ್ಯ ಶಾಸಕ, ಸಚಿವ ಎಸ್. ಅಂಗಾರ ಅವರು ದೇಗುಲಕ್ಕೆ ಆಗಮಿಸಲಿಲ್ಲ. ಈ ಮೂಲಕ ಟಿಕೆಟ್ ಕೈ ತಪ್ಪಿದ ನೋವು ತೋರಿಸಿದರು.
ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ ನೇತೃತ್ವದಲ್ಲಿ ಸುಳ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಪುತ್ತೂರು, ಕಡಬ ಪೊಲೀಸರು ಭದ್ರತೆ ಒದಗಿಸಿದ್ದರು. ಮಾಧ್ಯಮದ ಜೊತೆಗೆ ಮಾತನಾಡಿದ ಮುಖ್ಯಮಂತ್ರಿಗಳು, ನಾನು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಾಗ್ಗೆ ಭೇಟಿ ಕೊಡುತ್ತೇನೆ. ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಬಂದು ಧರ್ಮಸ್ಥಳದ ಮಂಜುನಾಥ ದೇವರ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದಿದ್ದೇನೆ. ಸಮಸ್ತ ಕನ್ನಡ ನಾಡಿನ ಸುಭೀಕ್ಷೆಗಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.
ಅಸಮಾಧಾನಿತ ಸಚಿವ ಅಂಗಾರ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಉತ್ತರವನ್ನು ಮುಖ್ಯಮಂತ್ರಿಗಳು ನೀಡಲಿಲ್ಲ. ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮುಖ್ಯಮಂತ್ರಿಗಳು ಆಗಮಿಸಿದರೂ ಕ್ಷೇತ್ರದ ಶಾಸಕ ಹಾಗೂ ಸಚಿವ ಎಸ್.ಅಂಗಾರ ಆಗಮಿಸಿದೇ ಮುನಿಸು ತೋರಿಸಿದರು.
ಸುಬ್ರಹ್ಮಣ್ಯ ಬಳಿಕ ಮಂಗಳೂರಿಗೆ ಬಂದ ಸಿಎಂ, ಮಂಗಳಾದೇವಿ ದೇವಸ್ಥಾನ ಮತ್ತು ಗರೋಡಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಇಂದು ರಾತ್ರಿ ನಗರದಲ್ಲಿ ವಾಸ್ತವ್ಯ ಮಾಡಲಿರುವ ಬೊಮ್ಮಾಯಿ, ನಾಳೆ ಬೆಳಗ್ಗೆ ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಲಿದ್ದಾರೆ. ಆ ಬಳಿಕ ಮಂಗಳೂರಿಗೆ ಬಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಸೋಮೇಶ್ವರದ ಸೋಮನಾಥೇಶ್ವರ ದೇವರ ದರ್ಶನ ಪಡೆಯಲಿದ್ದಾರೆ.
ಇದನ್ನೂಓದಿ:ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಬೊಮ್ಮಾಯಿ