ನಗರಸಭೆಯಿಂದ ರಸ್ತೆ ಬದಿಯಲ್ಲಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ.. ವ್ಯಾಪಾರಿಗಳಿಂದ ಕಣ್ಣೀರು - ವಿಡಿಯೋ - ನಗರಸಭೆ
ಹೊಸಕೋಟೆ (ಬೆಂಗಳೂರು ಗ್ರಾಮಾಂತರ):ನಗರದಲ್ಲಿ ಸೋಮವಾರ ಬೆಳಗ್ಗೆಯಿಂದಲೂ ಜೆಸಿಬಿಗಳು ಘರ್ಜಸಿದವು. ಹೊಸಕೋಟೆಯ ಕೋರ್ಟ್ ಸರ್ಕಲ್ನಲ್ಲಿ ರಸ್ತೆ ಬದಿಯಲ್ಲಿ ಸೋಮವಾರ ನಗರಸಭೆಯಿಂದ ತೆರವು ಕಾರ್ಯಾಚರಣೆ ನಡೆಯಿತು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೇ ರಸ್ತೆ ಬದಿಯಲ್ಲಿದ್ದ ಗೂಡಂಗಡಿಗಳ ತೆರವು ಕಾರ್ಯ ಕೈಗೊಳ್ಳಲಾಯಿತು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಲವು ಗೂಡಂಗಡಿಗಳು ತಲೆ ಎತ್ತಿದ್ದವು. ರಸ್ತೆ ಇಕ್ಕಟ್ಟಾಗಿರುವುದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಬೇಸತ್ತು ಹೋಗಿದ್ದರು. ಈ ಹಲವು ದೂರುಗಳು ಕೂಡ ಬಂದಿದ್ದವು. ಇದರ ಬೆನ್ನಲ್ಲೇ ನಗರಸಭೆಯಿಂದ ರಸ್ತೆ ಬದಿಯಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು. ಯಾವುದೇ ನೋಟೀಸ್ ನೀಡದೇ ಏಕಾಏಕಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರಿಂದ ಈ ಅಂಗಡಿಗಳ ಮಾಲೀಕರು ತೀವ್ರ ತೊಂದರೆ ಅನುಭವಿಸಿದರು. ಕೋರ್ಟ್ ಸರ್ಕಲ್ ನಿಂದ ಐಬಿ ವೃತ್ತದವರೆಗೂ ತೆರವು ಕಾರ್ಯ ಮಾಡಲಾಗಿದೆ. ಗೂಡಂಗಡಿಗಳಲ್ಲಿ ಸರಕುಗಳನ್ನು ತೆಗೆದುಕೊಳ್ಳಲು ಅವಕಾಶ ನೀಡದೇ ತೆರವು ಮಾಡಲಾಗಿದೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಗೂಡಂಗಡಿಗಳ ಮಾಲೀಕರು ಆರೋಪ ಮಾಡಿದರು.
''ರಸ್ತೆ ಬದಿಯಲ್ಲಿರುವ ಜಾಗ ಒತ್ತುವರಿ ಮಾಡಿ ಅಂಗಡಿಗಳನ್ನು ಇಟ್ಟುಕೊಂಡಿದ್ದರು. ಅವುಗಳನ್ನು ತೆರವು ಮಾಡಲಾಗುತ್ತಿದ್ದು, ಹಲವು ದಿನಗಳ ಹಿಂದೆಯೇ ಈ ಅಂಗಡಿಗಳನ್ನು ಖಾಲಿ ಮಾಡುವಂತೆ ತಿಳಿಸಲಾಗಿತ್ತು'' ಎಂದು ಕಾರ್ಯಾಚರಣೆಯಲ್ಲಿ ತೊಡಗಿದ್ದ ನಗರಸಭೆ ಅಧಿಕಾರಿಗಳು ತಿಳಿಸಿದರು.