ಎರಡು ಗುಂಪುಗಳ ಮಧ್ಯೆ ಗಲಾಟೆ: 12 ಗಂಟೆಯೊಳಗೆ ತಪ್ಪಿಸ್ಥರನ್ನು ಬಂಧಿಸುವಂತೆ ಒತ್ತಾಯ - ಹಿಂದು ಸಂಘಟನೆ ಮುಖಂಡರು
ಬಾಗಲಕೋಟೆ: ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು ಹಲವರು ಗಾಯಗೊಂಡಿದ್ದು, ಜಿಲ್ಲೆಯ ನವನಗರದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಬೈಕ್ ಸಂಚಾರ ಮಾಡುವ ವಿಷಯವಾಗಿ ಉಂಟಾದ ಜಗಳವು ವಿಕೋಪಕ್ಕೆ ತಿರುಗಿ, ಕಲ್ಲು ತೂರಾಟ ನಡೆದಿದೆ. ಇದರಿಂದ ಕೆಲವರು ಗಾಯಗೊಂಡಿದ್ದು, ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಾಗೂ ಡಿಎಸ್ಪಿ ಸೇರಿದಂತೆ ಇತರ ಅಧಿಕಾರಿಗಳು ಮುಕ್ಕಾಂ ಹೂಡಿ ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಹಿಂದೂ ಸಂಘಟನೆ ಮುಖಂಡರು ಆಸ್ಪತ್ರೆಯ ಮುಂದೆ ದೌಡಾಯಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 12 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ, ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ನವನಗರದ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ಪ್ರಕರಣ ದಾಖಲಾಗಿದ್ದು, ಈಗಾಗಲೇ ಸುಮಾರು 30 ಜನರನ್ನು ದಸ್ತಗಿರಿ ಮಾಡಲಾಗಿದೆ. ಅಲ್ಲದೇ, ಸೆಕ್ಟರ್ 49 ಹಾಗೂ 36ರಲ್ಲಿ ಕೆಎಸ್ಆರ್ಪಿ ತುಕುಡಿಯನ್ನು ನಿಯೋಜನೆ ಮಾಡಿ ಭದ್ರತೆ ಏರ್ಪಡಿಸಲಾಗಿದೆ.