ಇಲಿ ಸೆರೆ ಹಿಡಿಯಲು ಇರಿಸಿದ್ದ ಬೋನಿಗೆ ಬಿದ್ದ ಅಪರೂಪದ ಪುನುಗು ಬೆಕ್ಕು- ವಿಡಿಯೋ - ಈಟಿವಿ ಭಾರತ ಕನ್ನಡ
Published : Dec 23, 2023, 5:04 PM IST
ಚಾಮರಾಜನಗರ: ಆಹಾರ ಅರಸಿ ಬಂದ ಅಪರೂಪದ ಪುನುಗು ಬೆಕ್ಕು ಇಲಿ ಬೋನಿನಲ್ಲಿ ಸೆರೆಯಾದ ಘಟನೆ ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಗವಳ್ಳಿ ಗ್ರಾಮದ ರಾಜು ಎಂಬವರು ಇಲಿಗಳನ್ನು ಸೆರೆ ಹಿಡಿಯಲು ಬೋನನ್ನು ತರಿಸಿ ಇಟ್ಟಿದ್ದರು. ಆಹಾರ ಅರಸಿ ಬಂದ ಅಳಿವಿನಂಚಿನಲ್ಲಿರುವ ಪುನುಗು ಬೆಕ್ಕು ಇಲಿ ಬೋನಿಗೆ ಬಿದ್ದಿದೆ. ಇಂದು ಬೆಳಗ್ಗೆ ರಾಜು ಬಂದು ಗಮನಿಸಿದಾಗ ದಪ್ಪ ಮೂತಿಯ ಬೆಕ್ಕು ಕಂಡು ಹೌಹಾರಿದ್ದಾರೆ.
ಮಾಹಿತಿ ಅರಿತು ಸ್ಥಳಕ್ಕೆ ದೌಡಾಯಿಸಿದ ಉರಗ ಪ್ರೇಮಿ ಸ್ನೇಕ್ ಚಾಂಪ್ ಬೋನಿನಲ್ಲಿ ಸೆರೆಯಾಗಿದ್ದ ಪುನುಗು ಬೆಕ್ಕನ್ನು ರಕ್ಷಿಸಿ ಕೆ.ಗುಡಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಪುನುಗು ಬೆಕ್ಕು ಅಪರೂಪದ ವನ್ಯಜೀವಿಯಾಗಿದ್ದು, ಸುಗಂಧ ಹೊರಸೂಸುವ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ ಎಂದು ಸ್ನೇಕ್ ಚಾಂಪ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಇಲಿಯ ಆಟ ಬೆಕ್ಕಿಗೆ ಪ್ರಾಕಸಂಕಟ ತಂದೊಡ್ಡಿದ್ದು ಮಾತ್ರ ನಿಜ.
ಪುನುಗು ಬೆಕ್ಕು ಮುಂಗುಸಿಗಳ ಕುಟುಂಬಕ್ಕೆ ಸೇರಿದ ನಿಶಾಚರ ಸಸ್ತನಿಯಾಗಿದೆ. ಇವು ಬೆಕ್ಕಿನಂತೆಯೇ ದೇಹ ರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣ ಹೊಂದಿರುತ್ತವೆ. ಇವುಗಳ ಜನನಾಂಗದ ಗ್ರಂಥಿಯಿಂದ ಸುಗಂಧ ದ್ರವ್ಯ ಬಿಡುಗಡೆ ಆಗುತ್ತದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆಯುಕ್ತ ಮೂತ್ರ ಜೇನು ತುಪ್ಪದಂತಿರುತ್ತದೆ. ಇದನ್ನು ಸುಗಂಧ ದ್ರವ್ಯಗಳಲ್ಲಿ ಪರಿಮಳ ಹೆಚ್ಚಿಸುವ ವಸ್ತುವಾಗಿ ಬಳಸಲಾಗುತ್ತಿದ್ದು, ಇದೊಂದು ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ.
ಇದನ್ನೂ ಓದಿ:ಅಥಣಿಯಲ್ಲಿ ಸೆರೆಸಿಕ್ಕ ಅಪರೂಪದ ಪುನುಗು ಬೆಕ್ಕು - ವಿಡಿಯೋ