ಚಿಕ್ಕೋಡಿ: ಬಲ ಪ್ರದರ್ಶನ ಮಾಡಿದರೆ ಮಾತ್ರ ಕುಡಿಯುವುದಕ್ಕೆ ನೀರು - chikkodi
ಚಿಕ್ಕೋಡಿ: ಸರ್ಕಾರ ಹಲವು ನೀರಾವರಿ ಯೋಜನೆ ರೂಪಿಸಿದೆ, ಯಾವುದೇ ಕುಟುಂಬ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತವೆ. ಆದರೆ, ಶಿರಗೂರ ಗ್ರಾಮದ ಜನರು ಕುಡಿಯುವ ನೀರಿಗಾಗಿ ದಿನನಿತ್ಯ ಬಲ ಪ್ರದರ್ಶನ ಮಾಡಿ ಕುಡಿಯುವುದಕ್ಕೆ ನೀರು ಪಡೆಯುತ್ತಿದ್ದಾರೆ.
ಅಭಿವೃದ್ಧಿಯಲ್ಲಿ ಅತಿ ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಶಿರಗೂರ ಮತ್ತು ಪರಮಾನಂಜವಾಡಿ ಗ್ರಾಮದ ಜನರು ದಿನನಿತ್ಯ ಕುಡಿಯುವ ನೀರಿಗಾಗಿ ಸಂಕಷ್ಟ ಪಡುವಂತಾಗಿದೆ. ಈ ವಸತಿ ಪ್ರದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಜಲದ ಮೂಲವಾಗಿರುವ ಕೈ ಪಂಪು ಕಳೆದ ನಾಲ್ಕು ತಿಂಗಳುಗಳಿಂದ ಕೆಟ್ಟು ಹೊದ ಪರಿಣಾಮ ನಿತ್ಯ ಜೀವಜಲ ಪಡೆಯುವುದಕ್ಕೆ ಹರಸಾಹಸಪಟ್ಟು ನೀರನ್ನು ಪಡೆಯುತ್ತಿದ್ದಾರೆ. ಈ ಕೈ ಪಂಪಿನ ಮೇಲೆ ಶಾಲೆ ಮಕ್ಕಳು ಅವಲಂಬಿಸಿದ್ದಾರೆ. ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ಅಜೀತ್ ಚೌಗಲೆ, ಸುಮಾರು ಮುನ್ನೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಈ ಭಾಗದಲ್ಲಿ ನೀರು ಪೂರೈಸುತ್ತಿದ್ದ ಒಂದೆ ಒಂದು ಕೈ ಪಂಪು ಕೆಲ ತಿಂಗಳುಗಳಿಂದ ಕೆಟ್ಟು ಹೋಗಿದ್ದರೂ ಎರಡು ಗ್ರಾಮ ಪಂಚಾಯಿತಿಯವರು ದುರಸ್ತಿ ಮಾಡುತ್ತಿಲ್ಲ. ಕೈಪಂಪು ಕೆಟ್ಟು ಹೋಗಿರುವುದರಿಂದ ದೂರದಿಂದ ನೀರು ತರಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಮನೆಗಳಲ್ಲಿ ವಾಹನ ಇಲ್ಲದ್ದವರು ಈ ಕೆಟ್ಟು ಹೋಗಿರುವ ಕೈಪಂಪ್ಗೆ ಹಗ್ಗ ಹಾಕಿ ಜಗ್ಗಿ ನೀರು ತುಂಬಿಕೊಳ್ಳುತ್ತಾರೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಎರಡು ಗ್ರಾಮ ಪಂಚಾಯಿತಿ ಅವರಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಈ ಸಮಸ್ಯೆ ಕೂಡಲೇ ಬಗೆಹರಿಸದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ವಿಡಿಯೋ: ಜೋಡಿ ಚಿರತೆ ಬೋನಿಗೆ ಬಿದ್ದ ಸ್ಥಳದಲ್ಲೇ ಮತ್ತೊಂದು 8 ತಿಂಗಳ ಚಿರತೆ ಮರಿ ಸೆರೆ