ಕಚೇರಿಯಲ್ಲಿ ಮಹಿಳಾ ಅಧಿಕಾರಿಯ ರೌದ್ರಾವತಾರ, ಕಂಪ್ಯೂಟರ್ ಪುಡಿ - ಪುಡಿ, ಸಿಬ್ಬಂದಿ ತಲೆಗೆ ಪೆಟ್ಟು: ವಿಡಿಯೋ - ಕಚೇರಿಯಲ್ಲಿ ಗದ್ದಲ ಸೃಷ್ಟಿಸಿದ ಅಧಿಕಾರಿ
Published : Nov 25, 2023, 6:16 PM IST
ದುರ್ಗ್ (ಛತ್ತೀಸ್ಗಢ): ಛತ್ತೀಸ್ಗಢದ ದುರ್ಗ್ ಜಿಲ್ಲೆಯ ಭಿಲಾಯಿ ಸ್ಟೀಲ್ ಘಟಕದ ಕಚೇರಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಗಲಾಟೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆಂತರಿಕ ಲೆಕ್ಕ ಪರಿಶೋಧನಾ ವಿಭಾಗದ ಎಜಿಎಂ ಪ್ರಿಯಾಂಕಾ ಹೋರೊ ಎಂಬುವರೇ ಕಚೇರಿಯಲ್ಲಿ ಗದ್ದಲ ಸೃಷ್ಟಿಸಿದ ಅಧಿಕಾರಿಯಾಗಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ಅವರನ್ನು ಅಮಾನತುಗೊಳಿಸಿದೆ.
ಸ್ಟೀಲ್ ಘಟಕದ ಇಸ್ಪತ್ ಭವನದಲ್ಲಿ ನ.23ರಂದು ಗಲಾಟೆ ಸೃಷ್ಟಿಸಿರುವ ಅಧಿಕಾರಿ ಪ್ರಿಯಾಂಕಾ, ಸಿಟ್ಟಿನಲ್ಲಿ ಕಂಪ್ಯೂಟರ್, ಸಿಸಿಟಿವಿ ಕ್ಯಾಮರಾಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೇ, ಟಿಫಿನ್ ಬ್ಯಾಕ್ಸ್ನಿಂದ ತರಬೇತಿ ನಿರತ ಮಹಿಳಾ ಸಿಬ್ಬಂದಿ ತಲೆಗೆ ಹೊಡೆದಿದ್ದಾರೆ. ಹಲವು ದಾಖಲೆಗಳ ಮೇಲೆ ನೀರು ಎರಚಿ ರಂಪಾಟ ಮಾಡಿದ್ದಾರೆ. ಇಷ್ಟೇ ಅಲ್ಲ, ಸಿಐಎಸ್‌ಎಫ್ ಸಿಬ್ಬಂದಿಯೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ. ಮಹಿಳಾ ಅಧಿಕಾರಿಯ ಎಲ್ಲ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಹಿಳಾ ಅಧಿಕಾರಿಯ ರೌದ್ರಾವತಾರ ಕಂಡು ಬೆಚ್ಚಿ ಬಿದ್ದ ನೌಕರರು ಭಿಲಾಯಿ ಸ್ಟೀಲ್ ಘಟಕದ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಇದಾದ ಬಳಿಕ ಶುಕ್ರವಾರ ಸಂಜೆ ಆಡಳಿತ ಮಂಡಳಿಯು ಗಲಾಟೆ ಸೃಷ್ಟಿಸಿದ್ದ ಪ್ರಿಯಾಂಕಾ ಅವರನ್ನು ಅಮಾನತುಗೊಳಿಸಿದೆ. ಮತ್ತೊಂದೆಡೆ, ತಲೆಗೆ ಪೆಟ್ಟು ತಿಂತಿದ್ದ ತರಬೇತಿ ನಿರತ ಮಹಿಳಾ ಸಿಬ್ಬಂದಿ, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಶನಿವಾರ ತಮ್ಮ ದೂರು ಹಿಂಪಡೆದಿದ್ದಾರೆ. 2021ರಲ್ಲೂ ಅಧಿಕಾರಿ ಪ್ರಿಯಾಂಕಾ ಇದೇ ರೀತಿ ಗಲಾಟೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ