ಮನೆಯ ಕೊಟ್ಟಿಗೆಯಲ್ಲಿ ಅಡಗಿದ್ದ ಚಿರತೆ ಸೆರೆ : ವಿಡಿಯೋ
ಶಿವಮೊಗ್ಗ:ಮನೆಯೊಂದರ ಕೊಟ್ಟಿಗೆಯಲ್ಲಿ ಅಡಗಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸುರಕ್ಷಿತವಾಗಿ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಕುಮಾರ್ ಗೌಡ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ಚಿರತೆ ಸೇರಿಕೊಂಡಿತ್ತು. ಈ ಬಗ್ಗೆ ತಿಳಿದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಕಾರ್ಯಾಚರಣೆ ನಡೆಸಿದ್ದಾರೆ. ಚಿರತೆಗೆ ಅರವಳಿಕೆ ನೀಡುವ ಮೂಲಕ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಚಿರತೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹಂಪಿಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ರವಾನಿಸಲಾಗಿದೆ.
ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಡಿಎಫ್ಒ ಸಂತೋಷ್ ಕೆಂಚಪ್ಪ, ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರು, ಆರ್ ಎಫ್ಒ ಜಾವೇದ್ ಅಹ್ಮದ್ ಅಂಗಡಿ, ಶಿವಮೊಗ್ಗ ಲಯನ್ಸ್ ಸಫಾರಿಯ ಅರವಳಿಕೆ ತಜ್ಞ ಡಾ. ಮುರುಳೀಧರ ಸೇರಿದಂತೆ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ :ಮಂಜುಭರಿತ ಹಿಮದಲ್ಲಿ ನಲಿದ ಒರೆಗಾನ್ ಮೃಗಾಲಯದ ಜೋಡಿ ಬೀವರ್