ಚಂದ್ರಯಾನ 3 ಯಶಸ್ವಿಯಿಂದ ಶತಕೋಟಿ ಭಾರತೀಯರ ಹೃದಯ ನಭಕ್ಕೆ: ರಾಘವೇಶ್ವರ ಸ್ವಾಮೀಜಿ - ರಾಘವೇಶ್ವರ ಭಾರತಿ ಸ್ವಾಮೀಜಿ
ಕಾರವಾರ:ಬಹುನಿರೀಕ್ಷಿತ ಚಂದ್ರಯಾನ-3 ಗಗನನೌಕೆ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಇದು ಕೇವಲ ಚಂದ್ರಯಾನವಲ್ಲ ಶತಕೋಟಿ ಭಾರತೀಯರ ಹೃದಯ ಇಂದು ಆಗಸಕ್ಕೆ ಯಶಸ್ವಿಯಾಗಿ ಹಾರಿದೆ ಎಂದು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ತಿಳಿಸಿದರು. ಭಾರತದ ಇತಿಹಾಸದಲ್ಲಿ ಇದು ಅಪರೂಪದಲ್ಲಿ ಅಪರೂಪದ ದಿನ. ಉಡಾವಣೆ ಯಶಸ್ವಿಯಾದದ್ದು ಸಂಭ್ರಮ ತಂದಿದೆ. ನಮಗೆ ಇಷ್ಟು ಖುಷಿಯಾಗಿರಬೇಕಾದರೆ ಆ ವಿಜ್ಞಾನಿಗಳಿಗೆ ಅದೆಷ್ಟು ಸಂತಸವಾಗಿರಬೇಡ. ಹಿಂದಿನ ಕಾಲದಲ್ಲಿ ಋಷಿಮುನಿಗಳು ತಪಸ್ಸು ಮಾಡುತ್ತಿದ್ದುದನ್ನು ನಾವು ಕೇಳಿದ್ದೇವೆ. ಇಸ್ರೋದಲ್ಲಿ ವಿಜ್ಞಾನಿಗಳು ಮಾಡುತ್ತಿರುವುದು ತಪಸ್ಸಿಗೆ ಕಡಿಮೆಯೇನೂ ಅಲ್ಲ. ಅವರ ಅಗಾಧ ಪರಿಶ್ರಮ ಫಲಕೊಟ್ಟು ಆಕಾಶನೌಕೆ ಯಶಸ್ವಿಯಾಗಿ ಉಡಾವಣೆಯಾಗಿರುವುದು ಶತಕೋಟಿ ಭಾರತೀಯರು ಹೆಮ್ಮೆಪಡುವಂತ ವಿಚಾರ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಾವು ಧರ್ಮಪುರುಷರೆಲ್ಲ ಸೇರಿ ಅನುಷ್ಠಾನ ಮಡೋಣ.ಈ ಆಕಾಶನೌಕೆ ಚಂದ್ರನಲ್ಲಿ ಇಳಿದು ಭಾರತದ ಕೀರ್ತಿಪತಾಕೆ ಚಂದ್ರನಲ್ಲಿ ಸ್ಥಾಪಿಸುವಂತೆ ಆಗುವ ಸುದಿನಕ್ಕಾಗಿ ಪ್ರತೀಕ್ಷೆ ಮಾಡೋಣ. ಪ್ರಾರ್ಥನೆ, ತಪಸ್ಸು ಮಾಡೋಣ ಎಂದು ಹೇಳಿದರು.
ಯಶಸ್ವಿ ಹಾರಾಟಕ್ಕೆ ಪೂಜೆ: ಇನ್ನು ಶ್ರೀಹರಿಕೋಟ ಉಡಾವಣಾ ಕೇಂದ್ರದಿಂದ ಇಸ್ರೋದ ಚಂದ್ರಯಾನ 3 ಉಡಾವಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಟ್ಟಣದ ರಥಬೀದಿಯ ಶ್ರೀ ವೆಂಕಟರಮಣ ಮಂದಿರದಲ್ಲಿ ವಿಶೇಷ ಪೂಜೆ ನಡೆಯಿತು. ರೋಹಿಣಿ ನಕ್ಷತ್ರದ ಮೂಹೂರ್ತದಲ್ಲಿ ನಡೆದ ಯಶಸ್ವಿ ಉಡಾವಣೆ . ಇದರೊಂದಿಗೆ ವಿಜ್ಞಾನಿಗಳ ಉದ್ದೇಶ ಸಾಫಲ್ಯತೆ ಕುರಿತು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯು ಶ್ರೀಮುಖ್ಯಪ್ರಾಣ ಹಾಗೂ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಸನ್ನಿಧಾನದಲ್ಲಿ ಫಲ - ತಾಂಬೂಲ ಸಮರ್ಪಣೆ ಮಾಡಿ, ಅಖಂಡ ಜ್ಯೋತಿ ಪ್ರಜ್ವಲಿಸಿದರು. ಉಡಾವಣೆಯ ಯಶಸ್ವಿ ಹಾಗೂ ಲೋಕಕಲ್ಯಾಣಾರ್ಥ ಶ್ರೀಹರಿ - ಗುರುಗಳಲ್ಲಿ ಪ್ರಾರ್ಥಿಸಲಾಯಿತು.
ಇದನ್ನೂಓದಿ:ಚಂದ್ರಯಾನ 3 ಉಡಾವಣೆ ಯಶಸ್ವಿಗೆ ಪರಿಸರ ಪ್ರೇಮಿಗಳಿಂದ ವಿಶೇಷ ಪೂಜೆ - ವಿಡಿಯೋ