ಹೆಚ್ಡಿಕೆ ತೋಟದ ಮನೆಯಲ್ಲಿ ಚಂಡಿಕಾ ಯಾಗ:300ಕ್ಕೂ ಹೆಚ್ಚು ಪುರೋಹಿತರು ಭಾಗಿ
ರಾಮನಗರ:ರಾಜ್ಯವಿಧಾನಸಭೆ ಚುನಾವಣೆ ಸಮೀಪಿಸುತ್ತಿರು ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ತಮ್ಮ ಸ್ವಕ್ಷೇತ್ರ ಬಿಡದಿಯ ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ನೂರಾರು ಪುರೋಹಿತರಿಂದ ಯಾಗ ಮಾಡಿಸಿದ್ದಾರೆ. ರಾಜ್ಯಾದ್ಯಂತ ನಡೆಸಿದ ಪಂಚರತ್ನ ರಥ ಯಾತ್ರೆಯ ಯಶಸ್ಸು ಮತ್ತು ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಆರೋಗ್ಯ ಚೇತರಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಪೂಜೆ ಪುನಸ್ಕಾರಗಳನ್ನು ನಡೆಸುತ್ತಿದ್ದಾರೆ. ಸತತ 9 ದಿನಗಳ ಕಾಲ ಶತ ಚಂಡಿಕಾ ಯಾಗ ಮತ್ತು ಕೋಟಿ ಮೃತ್ಯುಂಜಯ ಹೋಮ ಜರುಗಲಿದೆ. ಪೂಜೆಯಲ್ಲಿ ಹೆಚ್ ಡಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ರೇವತಿ ಪಾಲ್ಗೊಂಡಿದ್ದರು.
ಇನ್ನು ಯಾಗ ನಡೆಸಲು ತೆಲಂಗಾಣದಿಂದ 300ಕ್ಕೂ ಹೆಚ್ಚು ಪುರೋಹಿತರು ಆಗಮಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರ ನಡುವೆ ಉತ್ತಮ ಸ್ನೇಹ ಬಾಂಧವ್ಯ ಇರುವುದರಿಂದ ಸ್ವತಃ ಚಂದ್ರಶೇಖರ್ ರಾವ್ ಅವರೇ ಪುರೋಹಿತರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಕಡುಬಿನ ಕಾಳಗ: ಈ ವರ್ಷ ಮಳೆ ಹೇಗಿರಲಿದೆ? ಕಾರ್ಣಿಕ ಕೇಳಿ..