ಮರಿಯಾನೆ ಸಾಕೋದು ಎಷ್ಟು ಕಷ್ಟ ಗೊತ್ತಾ?..ಮನಬಿಚ್ಚಿ ಮಾತನಾಡಿದ ಬೊಮ್ಮನ್ - ಬೆಳ್ಳಿ ದಂಪತಿ - ಚಾಮರಾಜನಗರ ನ್ಯೂಸ್
Published : Aug 26, 2023, 10:34 AM IST
ಚಾಮರಾಜನಗರ: ಆಸ್ಕರ್ ಪ್ರಶಸ್ತಿ ವಿಜೇತ 'ದಿ ಎಲಿಫೆಂಟ್ ವಿಸ್ಪರರ್ಸ್' ಡಾಕ್ಯುಮೆಂಟರಿಯ ಪಾತ್ರಧಾರಿಗಳಾದ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕನ್ನಡದಲ್ಲೇ ಪ್ರವಾಸಿಗರೊಂದಿಗೆ ಮಾತನಾಡಿದ್ದಾರೆ. ತಮಿಳುನಾಡಿನ ತೆಪ್ಪಕಾಡು ಆನೆ ಕ್ಯಾಂಪ್ಗೆ ದಂಪತಿ ಭೇಟಿ ಮಾಡಲು ಚಾಮರಾಜನಗರ ಯುವಕರು ತೆರಳಿದ್ದ ವೇಳೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.
"ಪ್ರಶಸ್ತಿ ಬಂದ ಬಳಿಕ ತಮ್ಮನ್ನು ನೋಡಲು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆನೆ ಮರಿ ಪಾಲನೆ ಮಾಡುವಾಗ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಮರಿಯಾನೆ ವಾಸಿಸುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಮಯಕ್ಕೆ ಸರಿಯಾಗಿ ಗ್ಲುಕೋಸ್ ನೀಡಬೇಕು. ನಮ್ಮ ವೈಯುಕ್ತಿಕ ಕೆಲಸಗಳು ಏನೇ ಇದ್ದರೂ ಒಂದು ಕ್ಷಣವೂ ಆನೆಯನ್ನ ಬಿಟ್ಟು ಹೋಗೋ ಹಾಗಿಲ್ಲ ಎಂದು ಮರಿಯಾನೆ ಪಾಲನೆ" ಬಗ್ಗೆ ವಿವರಿಸಿದರು.
ಆಸ್ಕರ್ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರ: ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ "ದಿ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರವಾಗಿ ಹೊರಹೊಮ್ಮಿದ್ದು, ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ವಿಭಾಗದಲ್ಲಿ ಆಸ್ಕರ್ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರ ಇದು ಎಂಬ ಖ್ಯಾತಿಗೂ ಪಾತ್ರವಾಗಿದೆ.
'ದಿ ಎಲಿಫೆಂಟ್ ವಿಸ್ಪರರ್ಸ್' ಕಥೆ ಏನು?: ಸಾಕ್ಷ್ಯಚಿತ್ರದ ಕಥಾವಸ್ತು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಅನಾಥ ಆನೆಯನ್ನು ದತ್ತು ತೆಗೆದುಕೊಳ್ಳುವ ಕುಟುಂಬದ ಸುತ್ತ ಸುತ್ತುತ್ತದೆ. ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಂಪತಿಯ ಕಥೆ ಇದರಲ್ಲಿದೆ. ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಲಾಗಿದೆ. ಭಾವನೆಯ ಜೊತೆಗೆ ಪ್ರಾಣಿಗಳು ಮತ್ತು ಮಾನವನ ನಡುವಿನ ಪ್ರೀತಿಯ ಸೆಳೆತ ಕಣ್ಣಿಗೆ ಕಟ್ಟುವಂತೆ ಡಾಕ್ಯುಮೆಂಟರಿಯಲ್ಲಿ ಮೂಡಿ ಬಂದಿದೆ.