ಚೈತ್ರಾ ಕುಂದಾಪುರ ಗ್ಯಾಂಗ್ ವಂಚನೆ ಪ್ರಕರಣ: ಆರೋಪಿ ಚನ್ನ ನಾಯ್ಕ್ ಸಹೋದರ ಹೇಳಿದ್ದಿಷ್ಟು
Published : Sep 17, 2023, 3:18 PM IST
ದಾವಣಗೆರೆ: ಚೈತ್ರ ಕುಂದಾಪುರ ಗ್ಯಾಂಗ್ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ A5 ಆರೋಪಿ ಆಗಿರುವ ಚನ್ನ ನಾಯ್ಕ್ ಈಗ ಸಿಸಿಬಿ ಪೊಲೀಸರ ವಶದಲ್ಲಿದ್ದಾನೆ. ಸಹೋದರ ವಿರೂಪಾಕ್ಷಪ್ಪ ಅವರು ಚನ್ನ ನಾಯ್ಕ್ ಬಗ್ಗೆ ಹೇಳಿರುವ ವಿವರಣೆ ಇಲ್ಲಿದೆ..
ಆರೋಪಿ ಚನ್ನ ನಾಯ್ಕ್ ಮೂಲತ: ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಬರುವ ಹರಪನಹಳ್ಳಿ ತಾಲೂಕಿನ ಮಾಚಿಹಳ್ಳಿ ತಾಂಡಾ ನಿವಾಸಿ. ಚನ್ನ ನಾಯ್ಕ್ ಮಾಚಿಹಳ್ಳಿ ತಾಂಡಾದಲ್ಲಿ ಜನಿಸಿ ಕೇವಲ 3 ನೇ ತರಗತಿ ಮಾತ್ರ ಓದಿದ್ದರೂ, ಐದಾರೂ ಭಾಷೆ ಮಾತನಾಡುತ್ತ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾನೆ.
ಈ ಹಿಂದೆ 2018 ರಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಎಸ್ಪಿ(ಸಮಾಜವಾದಿ) ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದನು. ಬಳಿಕ ಕೋವಿಡ್ ನಲ್ಲಿ ವ್ಯಾಪಾರ ನಷ್ಟವಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಂತರ ಬೆಂಗಳೂರು ಸೇರಿದ್ದನು. ಐದು ಭಾಷೆಗಳಲ್ಲಿ ಮಾತನಾಡುವ ಈ ಚತುರ ಚನ್ನ ನಾಯ್ಕ್, ರಾಜಕಾರಣಿ ಆಗುವ ಉತ್ಸಾಹದಲ್ಲಿ ಇರುವುದನ್ನು ಕಂಡು, ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಮತ್ತವರ ಗ್ಯಾಂಗ್ ಬಂಡವಾಳ ಮಾಡಿಕೊಂಡಿತು. ಐದನೇ ಆರೋಪಿಯಾಗಿರುವ ಚನ್ನ ನಾಯ್ಕ್ ಹಿಂದಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾನೆ. ಹೀಗಾಗಿ ಗಗನ್ ಮೂಲಕ ಚೈತ್ರ ಕುಂದಾಪುರ ಪರಿಚಯವಾಗಿ ಪ್ರಕರಣದಲ್ಲಿ ಒಂದು ರೋಲ್ ಮಾಡಿದ್ದ. ಮುಂದೆ ನಿನಗೆ ಒಳ್ಳೆ ರಾಜಕೀಯ ಭವಿಷ್ಯ ಸಿಗುತ್ತದೆ ಎಂಎಲ್ ಎ , ಎಂಪಿ ಆದ್ರೆ ನಿನಗೆ ಒಳ್ಳೆಯದಾಗುತ್ತದೆ ಎಂದು ಗ್ಯಾಂಗ್ ಆತನನ್ನು ನಂಬಿಸಿತ್ತು. ಬೇರೆ ಬೇರೆ ಸಣ್ಣ ಕೈಗಾರಿಕೆ ಶುರು ಮಾಡಿ ಮಾಡಿ ನಷ್ಟ ಅನುಭವಿಸಿದ್ದ ಚನ್ನ ನಾಯ್ಕ್ , ಹಬ್ಬ ಹರಿದಿನ ವಿಶೇಷ ಸಂದರ್ಭಗಳಲ್ಲಿ ಮಾತ್ರ ಗ್ರಾಮಕ್ಕೆ ಬರುತ್ತಿದ್ದನು ಎಂದು ಸಹೋದರ ವಿರೂಪಾಕ್ಷಪ್ಪ ವಿವರಿಸಿದ್ದಾರೆ.
ಚನ್ನ ನಾಯ್ಕ್ ವರ್ಷಕ್ಕೊಮ್ಮೆ ದೀಪಾವಳಿ ಹಬ್ಬಕ್ಕೆ ಗ್ರಾಮಕ್ಕೆ ಬರ್ತಿದ್ದನು, ನಾವು ಇಲ್ಲಿದ್ದೀವಿ.. ಅವನು ಅಲ್ಲಿದ್ದಾನೆ ಏನ್ ಮಾಡೋದು, ಊರಲ್ಲಿ ಇದ್ದಿದ್ರೇ ಏನಾದರೂ ಮಾಡ್ಬಹುದಿತ್ತು. ಕಳೆದ ಬಾರಿ ದೀಪಾವಳಿ ಹಬ್ಬಕ್ಕೆ ಬಂದಿದ್ದ. ಮತ್ತೆ ಆತ ಊರಿಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂಓದಿ:ಚೈತ್ರಾ ಕುಂದಾಪುರಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ: ಆರಗ ಜ್ಞಾನೇಂದ್ರ