ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ಕೊಟ್ಟಿಲ್ಲ ಎನ್ನುವುದು ಸರಿಯಲ್ಲ: ಕೇಂದ್ರ ಸಚಿವ ಭಗವಂತ ಖೂಬಾ - ಕೇಂದ್ರ ಸಚಿವ ಭಗವಂತ ಖೂಬಾ ತಿರುಗೇಟು
ಹುಬ್ಬಳ್ಳಿ: ನನ್ನ ಯೋಗ್ಯತೆಗೆ ತಕ್ಕಂತೆ ಪ್ರಧಾನಮಂತ್ರಿಗಳು ಮತ್ತು ನನ್ನ ಪಕ್ಷ ನನಗೆ ಸ್ಥಾನಮಾನ, ಜವಾಬ್ದಾರಿ ನೀಡಿದೆ. ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ಕೊಟ್ಟಿಲ್ಲ ಅನ್ನುವುದು ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಕೇಂದ್ರ ಸಚಿವ ಭಗವಂತ ಖೂಬಾ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಪೇಕ್ಷೆ ಪಡೆಯದೆಯೇ ಪಕ್ಷ ಸದಾ ಒಂದಿಲ್ಲೊಂದು ಜವಾಬ್ದಾರಿ ಕೊಟ್ಟಿದೆ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ತುಂಬಾ ಪ್ರಾಮಾಣಿಕತೆಯಿಂದ ನಿಭಾಯಿಸಿಕೊಂಡು ಬಂದಿದ್ದೇನೆ. ನನ್ನ ಅನುಭವಕ್ಕೆ ತಕ್ಕಂತೆ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ 12 ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣಾ ಪ್ರಕ್ರಿಯೆ ಚುನಾವಣೆ ಘೋಷಣೆಯ ನಂತರ ನಡೆಯುತ್ತದೆ. ಅಲ್ಲಿಯವರೆಗೂ ಇಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸಬಾರದು. 12 ಜನರ ಬದಲಾವಣೆ ಆಗುತ್ತದೆ ಅನ್ನುವುದನ್ನು ನಿಖರವಾಗಿ ಹೇಳಲು ಆಗುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಚುನಾವಣೆಯಲ್ಲಿ ಸೋಲಿನ ಕುರಿತು ಅವಲೋಕನವನ್ನು ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷ ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಅಧೋಗತಿಗೆ ತರಲು ಹೊರಟಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಅನ್ನುವ ದುರುದ್ದೇಶದಿಂದ ಆಶ್ವಾಸನೆ ನೀಡಿದ್ದಾರೆ. ಕಾಂಗ್ರೆಸ್‌ನ ಎಟಿಎಂನಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಕಾಂಗ್ರೆಸ್ ದುರುದ್ದೇಶದ ಬಗ್ಗೆ ಜನರು ಈಗಾಗಲೇ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಎರಡು ತಿಂಗಳಲ್ಲಿ ಕಾಂಗ್ರೆಸ್ ನವರ ಬಣ್ಣವನ್ನು ಮತದಾರರು ಬಯಲಿ ಎಳೆಯುತ್ತಾರೆ ಎಂದ ಟೀಕಿಸಿದರು.
ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೇವೆ ಎಂಬುದು ಕಾಂಗ್ರೆಸ್‌ನ ಸುಳ್ಳು ಆರೋಪ. ಉದ್ಯಮಿಗಳ ಸಾಲಮನ್ನಾ ಮಾಡಿರುವ ಬಗ್ಗೆ ದಾಖಲೆಗಳಿದ್ದರೆ ನೀಡಲಿ. ಮೋದಿಯವರು ಪ್ರತಿಯೊಬ್ಬರಿಗೆ ಹದಿನೈದು ಲಕ್ಷ ಕೊಡುತ್ತಾರೆ ಎಂದಿರುವ ವಿಡಿಯೋ ದಾಖಲೆಗಳಿದ್ದರೆ ಕೊಡಿ. ನಾವು ಸಿದ್ದರಾಮಯ್ಯನವರು ನೀಡಿರುವ ಆಶ್ವಾಸನೆಗಳ ಕುರಿತು ವಿಡಿಯೋ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ :ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಜನಾರ್ದನ ರೆಡ್ಡಿ