ಹಾಡಹಗಲೇ ಪುಡಿ ರೌಡಿಗಳ ಹಾವಳಿಗೆ ಬೇಕರಿ ಗಾಜು ಧ್ವಂಸ - VIDEO - ಬ್ಯಾಡರಹಳ್ಳಿ ಪೊಲೀಸರು
ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪುಡಿ ಹಾವಳಿ ಶುರುವಾಗಿದೆ. ಹಾಡಹಗಲೇ ಬೇಕರಿ ಬಳಿ ಬಂದ ಇಬ್ಬರು ದುರುಳರು ಶೋ ಕೇಸ್ ಧ್ವಂಸಗೊಳಿಸಿ ಪುಂಡಾಟ ಮೆರೆದಿರುವ ಘಟನೆ ಬ್ಯಾಡರಹಳ್ಳಿ ಠಾಣಾ ತುಂಗಾನಗರದಲ್ಲಿ ಆಗಸ್ಟ್ 16 ರಂದು ನಡೆದಿದೆ. ಸಂಜೆ 5 ಗಂಟೆ ಸುಮಾರಿಗೆ ಕೇಕ್ ಕಾರ್ನರ್ & ಸ್ವೀಟ್ಸ್ ಅಂಗಡಿ ಬಳಿ ಬಂದಿದ್ದ 2-3 ಜನ ದುಷ್ಕರ್ಮಿಗಳು, ಏಕಾಏಕಿ ದೊಣ್ಣೆ ಮತ್ತು ಕಲ್ಲಿನಿಂದ ಬೇಕರಿಯ ಶೋ ಕೇಸ್ ಗ್ಲಾಸ್ ಪುಡಿ ಮಾಡಿದ್ದು, ಅಂಗಡಿ ಸಾಮಗ್ರಿಗಳನ್ನು ಧ್ವಂಸಗೊಳಿಸಿದ್ದಾರೆ. ಪುಂಡರ ಅಟ್ಟಹಾಸ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ, ಬೈಕ್ನಲ್ಲಿ ಬಂದಿರುವ ಆರೋಪಿಗಳಲ್ಲಿ ಮೊದಲಿಬ್ಬರು ಅಂಗಡಿ ವಸ್ತುಗಳಿಗೆ ಹಾನಿಗೊಳಿಸಿದರೆ, ಸಮಾಧಾನವಾಗದೇ ಅದೇ ತಂಡದ ಮತ್ತೋರ್ವ ಮತ್ತೆ ಬಂದು ಕಲ್ಲಿನಿಂದ ದಾಳಿ ನಡೆಸಿದ್ದಾನೆ.
ಇನ್ನು ಆರೋಪಿಗಳು ಯಾರೆಂಬುದು ತಿಳಿಯಬಾರದು ಎಂಬ ಕಾರಣಕ್ಕೆ ಮುಖಕ್ಕೆ ಮಾಸ್ಕ್ ಧರಿಸಿ, ಬೈಕ್ ನಂಬರ್ ಫಲಕಕ್ಕೆ ಸಗಣಿ ಬಳಿದುಕೊಂಡು ಬಂದು ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್.ಸಿ.ಆರ್ ) ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಚಿಕ್ಕೋಡಿ: ನಂಬಿಕೆ ದ್ರೋಹ ಆರೋಪದಲ್ಲಿ ಸ್ನೇಹಿತನ ಬರ್ಬರ ಕೊಲೆ