ಬೆಂಗಳೂರಿನಲ್ಲಿ ಧರೆಗುರುಳಿದ ಬೃಹತ್ ಮರ: ಏಳೆಂಟು ಕಾರುಗಳು ಜಖಂ, ಕೆಲವರಿಗೆ ಗಾಯ
ಬೆಂಗಳೂರು :ನಗರದಲ್ಲಿ ಇಂದು ಸಂಜೆ ವೇಳೆ ಸುರಿದ ಸಾಧಾರಣ ಮಳೆಗೆ ಬೃಹತ್ ಮರವೊಂದು ಧರೆಗುರುಳಿ ಅನಾಹುತ ಸೃಷ್ಟಿಸಿದ ಘಟನೆ ನಡೆದಿದೆ. ಕನ್ನಿಂಗ್ ಹ್ಯಾಮ್ ರಸ್ತೆಯ ಚಂದ್ರಿಕಾ ಹೋಟೆಲ್ ಕಾರ್ನರ್ ಬಳಿ ಸಂಜೆ 7:30ರ ಸುಮಾರಿಗೆ ಘಟನೆ ನಡೆದಿದ್ದು, ರಾಜಶೇಖರ (18) ಎಂಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಗಾಯಾಳುವನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರ ಬಿದ್ದ ರಭಸಕ್ಕೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಏಳೆಂಟು ಕಾರುಗಳು ಜಖಂಗೊಂಡಿವೆ. ಘಟನೆಯಿಂದ ಕೂದಲೆಳೆ ಅಂತರದಲ್ಲಿ ಹಲವರು ಪಾರಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ:ಭಾರಿ ಮಳೆಗೆ ಪೊಲೀಸ್ ಠಾಣೆ ಮುಳುಗಡೆ; ಆರೋಪಿಯನ್ನು ದೋಣಿಯಲ್ಲಿ ಕೋರ್ಟ್‌ಗೆ ಕರೆದೊಯ್ದ ಪೊಲೀಸರು!
ಮರ ಬಿದ್ದ ಹಿನ್ನೆಲೆಯಲ್ಲಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಸಂಚಾರ ದಟ್ಟಣೆವುಂಟಾಗಿದ್ದು, ಸ್ಥಳಕ್ಕೆ ಹೈಗ್ರೌಂಡ್ಸ್ ಸಂಚಾರಿ ಪೊಲೀಸರು ದೌಡಾಯಿಸಿದ್ದಾರೆ. ವಿದ್ಯುತ್ ಸಂಪರ್ಕ ಸಹ ಕಡಿತಗೊಂಡಿದ್ದು, ಸ್ಥಳಕ್ಕೆ ಆಗಮಿಸಿರುವ ಬಿಬಿಎಂಪಿ ಹಾಗೂ ಬೆಸ್ಕಾಂ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಉತ್ತರ ಭಾರತದಲ್ಲಿ ಮಳೆಯ ರುದ್ರನರ್ತನ; 39ಕ್ಕೂ ಹೆಚ್ಚು ಮಂದಿ ಸಾವು, ಹಿಮಾಚಲದಲ್ಲಿ ಜಲಪ್ರಳಯ!