ಮೈಸೂರು: ಪೌರ ಕಾರ್ಮಿಕನಿಗೆ ಡಿಕ್ಕಿ ಹೊಡೆದ ಕಾರು.. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Published : Aug 29, 2023, 2:57 PM IST
|Updated : Aug 29, 2023, 6:17 PM IST
ಮೈಸೂರು:ಬೆಳಗ್ಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕನಿಗೆ, ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಪೌರ ಕಾರ್ಮಿಕನ ಕಾಲು ತುಂಡಾಗಿ ರಸ್ತೆಯಲ್ಲೇ ಬಿದ್ದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ದೇವರಾಜ ಅರಸು ರಸ್ತೆಯಲ್ಲಿ ನಡೆದಿದೆ. ಭಯಾನಕ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಾನುವಾರ ಬೆಳಗ್ಗೆ ಎಂದಿನಂತೆ ಮೈಸೂರು ಮಹಾನಗರ ಪಾಲಿಕೆಯ ಖಾಯಂ ಪೌರ ಕಾರ್ಮಿಕ ಮಹದೇವ (36) ಎಂಬುವವರು ದೇವರಾಜ ಅರಸು ರಸ್ತೆಯ ಜಯ ಆಂಜನೇಯ ದೇವಾಲಯದ ಸಮೀಪ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ, ಕೆ ಆರ್ ವೃತ್ತದ ಕಡೆಯಿಂದ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಮಹದೇವ ಎಂಬ ಪೌರ ಕಾರ್ಮಿಕನಿಗೆ ಗುದ್ದಿದೆ. ಪರಿಣಾಮ ಕಾರ್ಮಿಕನ ಕಾಲು ತುಂಡಾಗಿದ್ದು ಕಾಲು ಒಂದೆಡೆ, ಆತ ಮತ್ತೊಂದು ಕಡೆ ಬಿದ್ದಿದ್ದಾನೆ. ಕಾರು ವೇಗವಾಗಿ ಬಂದು ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದೆ. ಕಾರಿನ ಭಾಗವೊಂದು ನಜ್ಜುಗುಜ್ಜಾಗಿದೆ. ಕಾರು ರಸ್ತೆಯಲ್ಲಿ ನಿಂತಿದ್ದು, ಪೌರ ಕಾರ್ಮಿಕನನ್ನು ತಕ್ಷಣವೇ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ನಿವಾಸಿಯಾಗಿರುವ ಕಾರು ಚಾಲಕನನ್ನು ಮಂಜುನಾಥ್ (45) ಎಂದು ಗುರುತಿಸಲಾಗಿದೆ. ವೇಗವಾಗಿ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದಾನೆ ಎಂದು ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಒಳಗಾದ ಕಾರ್ನ್ನು ದೇವರಾಜ್ ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಬರೋಬ್ಬರಿ 174 ಕಿ.ಮೀ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಿ ಹರಕೆ ತೀರಿಸಿದ ಹಾವೇರಿಯ ಯುವಕ: ವಿಡಿಯೋ