ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು - ವಿಡಿಯೋ - ಬೆಂಗಳೂರು ಮೈಸೂರು ಹೆದ್ದಾರಿ
ಮಂಡ್ಯ:ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಒಂದಿಲ್ಲೊಂದು ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಶನಿವಾರವೂ ಕೂಡ ಇಲ್ಲಿ ಮತ್ತೊಂದು ಪ್ರಕರಣ ನಡೆದಿದೆ. ತಾಂತ್ರಿಕ ದೋಷದಿಂದ ರೆನಾಲ್ಟ್ ಡಸ್ಟರ್ ಕಾರು ಹೊತ್ತಿ ಉರಿದ ಘಟನೆ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶ್ರೀರಂಗಪಟ್ಟಣ ತಾಲೂಕಿನ ಗೌರಿಪುರ ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಪಿರಾನ್ ಎಂಬುವವರ ರೆನಾಲ್ಟ್ ಡಸ್ಟರ್ ಕಾರು ಹೊತ್ತಿ ಉರಿದಿದೆ. ತಮ್ಮ ಕುಟುಂಬದ ಜೊತೆ ಮೈಸೂರಿಗೆ ತೆರಳುತ್ತಿದ್ದಾಗ ಶ್ರೀರಂಗಪಟ್ಟಣದ ಗೌರಿಪುರ ಗೇಟ್ ಬಳಿ ಕಾರಿನ ಇಂಜಿನಲ್ಲಿ ಹೊಗೆ ಕಾಣಿಸಿಕೊಂಡಿದೆ.
ಇದನ್ನು ಗಮನಿಸಿ ತಕ್ಷಣವೇ ಕಾರನ್ನು ನಿಲ್ಲಿಸಿ ಕಾರಿನಲ್ಲಿದ್ದ ಎಲ್ಲರನ್ನೂ ಕೆಳಗಿಳಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಕಾರು ಬೆಂಕಿಯ ಕೆನ್ನಾಲಿಗೆ ಭಾಗಶಃ ಸುಟ್ಟು ಹೋಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಅಗಮಿಸಿ ಬೆಂಕಿ ನಂದಿಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.