ರಾಜಕೀಯ ಶಕ್ತಿ ಕೇಂದ್ರ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ - political powerhouse Kurudumale Vinayaka
Published : Nov 14, 2023, 5:44 PM IST
ಕೋಲಾರ:ರಾಜ್ಯ ಬಿಜೆಪಿ ಘಟಕದ ನೂತನ ಸಾರಥಿ ಬಿ.ವೈ.ವಿಜಯೇಂದ್ರ ಅವರು ತಮ್ಮ ಪದಗ್ರಹಣಕ್ಕೂ ಮುನ್ನ ಇಂದು ಮುಳಬಾಗಿಲು ತಾಲೂಕಿನ ಪ್ರಸಿದ್ಧ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ದಂಪತಿ ಸಮೇತ ದೇವಾಲಯಕ್ಕೆ ಆಗಮಿಸಿದ ಅವರು, ರಾಜಕೀಯ ಶಕ್ತಿ ಕೇಂದ್ರ ವಿನಾಯಕನ ಬಳಿ ತಮ್ಮ ಪ್ರಾರ್ಥನೆ ಸಲ್ಲಿಸಿದರು.
ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು, ಜೊತೆಗೆ ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು, ಅದಕ್ಕಾಗಿ ಶಕ್ತಿಕೊಡುವಂತೆ ವಿನಾಯಕನಲ್ಲಿ ಪ್ರಾರ್ಥನೆ ಮಾಡಿಕೊಂಡಿರುವುದಾಗಿ ವಿಜಯೇಂದ್ರ ಹೇಳಿದರು. ಈ ವೇಳೆ, ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಂಸದ ಮುನಿಸ್ವಾಮಿ, ಪಿಸಿ ಮೋಹನ್ ಸೇರಿದಂತೆ ಜಿಲ್ಲೆಯ ಹಲವು ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಸಾಥ್ ನೀಡಿದರು.
ಇದಕ್ಕೂ ಮುನ್ನ ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ರಾಷ್ಟ್ರೀಯ ಹೆದ್ದಾರಿ- 75ರ ರಾಮಸಂದ್ರ ಬಳಿ ಹೂಮಾಲೆ ಹಾಕಿ ಪಟಾಕಿ ಸಿಡಿಸಿ ನೂತನ ರಾಜ್ಯಾಧ್ಯಕ್ಷರನ್ನು ಸ್ವಾಗತಿಸಲಾಯಿತು. ಜೆಸಿಬಿಗಳ ಮೇಲೆ ನಿಂತು ವಿಜಯೇಂದ್ರ ಅವರ ಮೇಲೆ ಹೂ ಸುರಿದರು. ಈ ವೇಳೆ, ನೆರದಿದ್ದ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಬಿ.ವೈ.ವಿಜಯೇಂದ್ರ ಅವರಿಗೆ ಎಂದು ಜೈಕಾರ ಹಾಕಿದರು. ಆಗ ವಿಜಯೇಂದ್ರ ಕಾರ್ಯಕರ್ತರತ್ತ ಕೈಬೀಸಿ ನಮಸ್ಕರಿಸಿ ನಂತರ ಕುರುಡುಮಲೆ ವಿನಾಯಕನ ದೇವಾಲಯದತ್ತ ಹೊರಟರು. ಮಾರ್ಗ ಮಧ್ಯದಲ್ಲೂ ಅಲ್ಲಲ್ಲಿ ಅಭಿಮಾನಿಗಳು ವಿಜಯೇಂದ್ರ ಅವರಿಗೆ ಹೂ ಮಾಲೆ ಹಾಕಿ ಅಭಿನಂದಿಸಿದರು.
ಇದನ್ನೂ ಓದಿ:'ಎರಡು - ಮೂರು ದಿನಗಳಲ್ಲಿ ವಿಪಕ್ಷ ನಾಯಕರ ನೇಮಕ': ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ