ಹುಬ್ಬಳ್ಳಿ ಚಿಗರಿ ಬಸ್‌ನಲ್ಲಿ ಬೆಂಕಿ: 30ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರು
Published : Dec 6, 2023, 5:28 PM IST
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನಡುವೆ ತ್ವರಿತ ಬಸ್ ಸೇವೆ ನೀಡುವ ಬಿಆರ್‌ಟಿಎಸ್ ಚಿಗರಿ ಬಸ್‌ನಲ್ಲಿ ಇಂದು ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಎ.ಪಿ.ಎಂ.ಸಿ ನಿಲುಗಡೆ ಬಿಆರ್‌ಟಿಎಸ್ ಬಸ್ ನಂ. KA-25 / F-3472ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಧಾರವಾಡದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ವೇಳೆ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಎಚ್ಚೆತ್ತ ಬಸ್ ಚಾಲಕ, ಕೂಡಲೇ ಪ್ರಯಾಣಿಕರನ್ನು ಬಸ್ನಿಂದ ಇಳಿಸಿದ್ದಾರೆ. ಬಳಿಕ ಬಸ್ಗೆ ಹತ್ತಿದ್ದ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಚಾಲಕನ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿದಿದೆ. ಚಿಗರಿ ಬಸ್ಗಳಲ್ಲಿ ಆಗಾಗ ಇಂತಹ ಘಟನೆಗಳು ಸಂಭವಿಸುತ್ತಲೇ ಇವೆ. ಇದರಿಂದ ಪ್ರಯಾಣಿಕರು ಆತಂಕದಲ್ಲಿಯೇ ಬಸ್ಗಳಲ್ಲಿ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ನ ಸಮರ್ಪಕ ನಿರ್ವಹಣೆ ಮಾಡದಿರುವುದೇ ಅವಘಡಗಳಿಗೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಕಳೆದ ನವೆಂಬರ್ ತಿಂಗಳಲ್ಲಿ ಕೆಎಸ್ಆರ್ಟಿಸಿ ಬಸ್ನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿತ್ತು. ಈ ವೇಳೆ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ :KSRTC ಬಸ್ಗೆ ಬೆಂಕಿ; ತಪ್ಪಿದ ಭಾರಿ ಅನಾಹುತ