ಬಿಎಸ್ಎಫ್ - ಪೊಲೀಸ್ ಜಂಟಿ ಶೋಧ: ಪಂಜಾಬ್ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ವಶಕ್ಕೆ - punjab
ತರ್ನ್ ತರಣ್ (ಪಂಜಾಬ್):ಬಿಎಸ್‌ಎಫ್ ಮತ್ತು ಪಂಜಾಬ್ ಪೊಲೀಸ್ ಪಡೆಗಳು ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯ ಮಸ್ತಗಢ ಗ್ರಾಮದ ಬಳಿಯ ಕೃಷಿ ಜಮೀನಿನಲ್ಲಿ ಮುರಿದ ಸ್ಥಿತಿಯಲ್ಲಿದ್ದ ಡ್ರೋನ್ ಅನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ, ಬಿಎಸ್ಎಫ್ ಮತ್ತು ಪಂಜಾಬ್ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು. ಮಸ್ತಗಢ ಗ್ರಾಮದ ಹೊರವಲಯದಲ್ಲಿ ಕರ್ತಾರ್ ಸಿಂಗ್ ಎಂಬುವವರ ಪುತ್ರ ಬಕ್ಷೀಶ್ ಸಿಂಗ್ ಅವರ ಜಮೀನಿನಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ವಶಪಡಿಸಿಕೊಂಡರು. ವಶಪಡಿಸಿಕೊಂಡ ಡ್ರೋನ್ ಸಂಪೂರ್ಣವಾಗಿ ಮುರಿದು ಹೋಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಡ್ರೋನ್ ಕ್ವಾಡ್‌ಕಾಪ್ಟರ್, ಡಿಜೆಐ ಮ್ಯಾಟ್ರಿಸ್ 300 ಆರ್‌ಟಿಕೆ ಮಾದರಿಗೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಗಡಿಯಾಚೆಯಿಂದ ಶಾಂತಿ ಕದಡುವ ಪ್ರಯತ್ನಗಳು ಮುಂದುವರೆದಿದೆ. ಆದರೆ, ಅವರಿಗೆ ತಕ್ಕ ಪ್ರತ್ಯುತ್ತರ ಕೊಡಲು ನಾವು ಯಾವಾಗಲೂ ಸಿದ್ಧರಾಗಿರುತ್ತೇವೆ. ಶತ್ರುಗಳ ಕೆಟ್ಟ ಯೋಜನೆಗಳು ಯಶಸ್ವಿಯಾಗಲು ಎಂದಿಗೂ ಬಿಡುವುದಿಲ್ಲ. ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಡಿಎಸ್ಪಿ ಪ್ರೀತಿಂದರ್ ಸಿಂಗ್ ಹೇಳಿದರು. ಡ್ರೋನ್ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಡ್ರೋನ್‌ನ ವಿಧಿವಿಜ್ಞಾನ ಪರೀಕ್ಷೆಯನ್ನೂ ನಡೆಸಲಾಗುವುದು ಎಂದು ಅವರು ಹೇಳಿದರು.
ಕಳೆದ ಮಂಗಳವಾರ ಕೂಡ ಗಡಿ ಭದ್ರತಾ ಪಡೆ ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿತ್ತು. ಈ ವೇಳೆ 2.35 ಕೆಜಿ ಹೆರಾಯಿನ್ ವಶಕ್ಕೆ ಪಡೆದುಕೊಂಡಿತ್ತು.
ಇದನ್ನೂ ಓದಿ:3 ಕೆ.ಜಿ ಹೆರಾಯಿನ್ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್: ವಿಡಿಯೋ