ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಹರಕೆ ಸೀರೆ ಒಪ್ಪಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ - ಈಟಿವಿ ಭಾರತ ಕನ್ನಡ
ಮಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಇಂದು ಮಂಗಳೂರಿನ ಹೊರವಲಯದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆಯನ್ನು ಸಲ್ಲಿಸಿದ್ದಾರೆ. ಈ ವೇಳೆ ಪತಿ ರಾಜ್ ಕುಂದ್ರಾ, ಮಕ್ಕಳು, ಸಹೋದರಿ ನಟಿ ಶಮಿತಾ ಶೆಟ್ಟಿ, ಶಿಲ್ಪಾ ಶೆಟ್ಟಿಯವರ ತಾಯಿ ಜೊತೆಗಿದ್ದರು. ಮಗುವಿಗಾಗಿ ಹರಕೆ ಹೊತ್ತುಕೊಂಡಿದ್ದ ನಟಿ ಶಿಲ್ಪಾ ಶೆಟ್ಟಿ ದಂಪತಿ ದೇವಿಗೆ ಹರಕೆ ಸೀರೆ ಒಪ್ಪಿಸಿದರು.
ಕರಾವಳಿ ಮೂಲದ ಶಿಲ್ಪಾ ಶೆಟ್ಟಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಭಕ್ತೆಯಾಗಿದ್ದಾರೆ. ಅವರು ಈ ಹಿಂದೆಯು ಹಲವು ಬಾರಿ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕಟೀಲು ದೇವಿಗೆ ಸೀರೆಯನ್ನು ಅರ್ಪಿಸಿದ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಮೊಕ್ತೇಸರ ವಾಸುದೇವ ಅಸ್ರಣ್ಣ ಅವರು ಪ್ರಸಾದ ನೀಡಿದರು. ಅರ್ಚಕರಾದ ಅನಂತ ಅಸ್ರಣ್ಣ, ಶ್ರೀಹರಿ ಅಸ್ರಣ್ಣ, ವಕೀಲ ರವಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ದೇವಳದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇಗುಲದ ನಾಗಸ್ವರ ವಾದಕರಾದ ಲಿಂಗಪ್ಪ ಸೇರಿಗಾರರ ವಾದ್ಯವಾದನವನ್ನು ಆಲಿಸಿದ ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಕಟೀಲು ರಥಬೀದಿಯಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ಕೆಲಹೊತ್ತು ವೀಕ್ಷಿಸಿದರು. ಈ ಸಂದರ್ಭದಲ್ಲಿ ವೇಷಗಳ ಪೋಟೋ ತೆಗೆದು ಸಂಭ್ರಮಿಸಿದರು.
ಇದನ್ನೂ ಓದಿ :ನೂಕು ನುಗ್ಗಲಿನಲ್ಲೇ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದ ಸಿದ್ದರಾಮಯ್ಯ