ಬಂಡೆಕಲ್ಲಿಗೆ ತಾಗಿ ಮುಳುಗುತ್ತಿದ್ದ ಬೋಟ್: 17 ಮಂದಿ ಮೀನುಗಾರರ ರಕ್ಷಣೆ!
ಕಾರವಾರ: ಅರಬ್ಬೀ ಸಮುದ್ರದಲ್ಲಿ ಬಂಡೆಕಲ್ಲಿಗೆ ತಾಗಿ ಮುಳುಗುತ್ತಿದ್ದ ಬೋಟ್‌ನಿಂದ 17 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ಬಳಿ ನಡೆದಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುಧಾಕರ ಖಾರ್ವಿ ಎಂಬುವವರಿಗೆ ಸೇರಿದ್ದ ಶ್ರೀದೇವಿ ಅನುಗ್ರಹ ಹೆಸರಿನ ಪರ್ಸಿನ್ ಬೋಟಿಗೆ ಆಕಸ್ಮಿಕವಾಗಿ ಬಂಡೆಗಲ್ಲೊಂದಕ್ಕೆ ಬೋಟಿನ ತಳ ಬಡಿದಿದ್ದು, ಪರಿಣಾಮ ಬೋಟಿಗೆ ಹಾನಿಯಾಗಿ ನೀರು ತುಂಬಿಕೊಳ್ಳಲು ಆರಂಭಿಸಿತ್ತು.
ಈ ವೇಳೆ ಮೀನುಗಾರರು ರಕ್ಷಣೆಗಾಗಿ ಸಂದೇಶ ರವಾನಿಸಿದ್ದು, ಅದರಂತೆ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಇತರ ಬೋಟುಗಳ ಮೀನುಗಾರರು ಮುಳುಗುತ್ತಿದ್ದ ಬೋಟಿನಲ್ಲಿದ್ದ 17 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿ ದಡಕ್ಕೆ ಕರೆ ತಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಬೋಟು ಮುಳುಗಡೆಯಾಗಿರುವ ಹಿನ್ನೆಲೆ ಬಲೆ ಸೇರಿದಂತೆ ಬೋಟಿನಲ್ಲಿದ್ದ ಯಂತ್ರೋಪಕರಣಗಳು ನೀರುಪಾಲಾಗಿದ್ದು, 10 ಲಕ್ಷ ರೂಪಾಯಿಗೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ:ಪ್ರಾಣ ರಕ್ಷಿಸಿದ ಲೈಫ್ ಗಾರ್ಡ್ ಮೇಲೆಯೇ ಹಲ್ಲೆ: ಮದ್ಯದ ಅಮಲಿನಲ್ಲಿ ಪ್ರವಾಸಿಗರ ರಂಪ