ಗಂಗಾನದಿಯಲ್ಲಿ ದೋಣಿ ಮುಳುಗಿ 4 ಸಾವು, 24 ಮಂದಿ ನಾಪತ್ತೆ: ಭೀಕರ ವಿಡಿಯೋ - ಉತ್ತರಪ್ರದೇಶದಲ್ಲಿ ಭೀಕರ ದೋಣಿ ದುರಂತ
ಬಲಿಯಾ (ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ ಸಂಭವಿಸಿದೆ. ಮಿತಿಗಿಂತಲೂ ಅಧಿಕ ಜನರನ್ನು ಹೊತ್ತು ಸಾಗುತ್ತಿದ್ದ ವೇಳೆ ಗಂಗಾನದಿಯಲ್ಲಿ ದೋಣಿ ಮಗುಚಿ ಬಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್ನೂ 24 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ಬಲಿಯಾ ನಗರದ ಮಾಲ್ದೇಪುರ ಎಂಬಲ್ಲಿ ಈ ದುರಂತ ನಡೆದಿದೆ. ಸೋಮವಾರ ಮುಂಜಾನೆ ಮುಂಡನ್ ಸಂಸ್ಕಾರದ ವೇಳೆ ಗಂಗಾ ನದಿಯಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಜನರನ್ನು ಸಾಗಿಸುತ್ತಿದ್ದಾಗ ದೋಣಿ ಮುಳುಗಿದೆ. ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಇದ್ದ ಕಾರಣ ಸಮತೋಲನ ಕಳೆದುಕೊಂಡ ದೋಣಿ ಮುಳುಗಿದೆ ಎಂದು ಹೇಳಲಾಗಿದೆ. ಚಿಕ್ಕ ದೋಣಿಯಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದರು.
ಸದ್ಯಕ್ಕೆ ದುರಂತದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. 24 ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಮಗುಚಿ ಬಿದ್ದ ಬಳಿಕ ಜನರು ಕಿರುಚಾಡಿದಾಗ ಅಲ್ಲಿಯೇ ಇದ್ದ ಮೀನುಗಾರರು ನದಿಗೆ ಧುಮುಕಿ ರಕ್ಷಣೆ ಧಾವಿಸಿದ್ದಾರೆ. ಕೆಲವರನ್ನು ಸಾಹಸ ಮಾಡಿ ದಡ ಸೇರಿಸಿದರೆ, ಹಲವರು ನೀರು ಪಾಲಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಯುವಕನ ಸ್ಥಿತಿ ಗಂಭೀರವಾಗಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು, ಈಜುಗಾರರು ಗಂಗಾನದಿ ದಡ ತಲುಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ:ಬಳ್ಳಾರಿಯಲ್ಲಿ ಸರ್ಕಾರಿ ಬಸ್-ಲಾರಿ ಅಪಘಾತ; ಇಬ್ಬರು ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ