'ದೇಶಭಕ್ತನಲ್ಲದ ರಾಹುಲ್ ಗಾಂಧಿಯನ್ನು ದೇಶದಿಂದಲೇ ಹೊರಹಾಕಿ': ಸಂಸದೆ ಪ್ರಜ್ಞಾಸಿಂಗ್ ಠಾಕೂರ್ - ರಾಹುಲ್ ಗಾಂಧಿ ವಿರುದ್ಧ ಟೀಕೆ
ನವದೆಹಲಿ: "ಭಾರತದಲ್ಲಿ ಪ್ರಜಾಪ್ರಭುತ್ವ ನಲುಗುತ್ತಿದೆ ಎಂದು ಲಂಡನ್ನಲ್ಲಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೇಶದಿಂದಲೇ ಹೊರಹಾಕಬೇಕು" ಎಂದು ಬಿಜೆಪಿ ಸಂಸದೆ, ಕಟ್ಟರ್ ಹಿಂದು ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.
ದಿಲ್ಲಿಯಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿರುವ ಬಿಜೆಪಿ ನಾಯಕಿ, "ವಿದೇಶಿ ಮಹಿಳೆಗೆ ಜನಿಸಿದ ಪುತ್ರ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದ. ಅದನ್ನೀಗ ರಾಹುಲ್ ಗಾಂಧಿ ಅವರು ಸಾಬೀತು ಮಾಡಿ ತೋರಿಸಿದ್ದಾರೆ. ಹೀಗಾಗಿ ಅವರನ್ನು ದೇಶದಿಂದಲೇ ಹೊರದಬ್ಬಬೇಕು" ಎಂದು ಕಟುವಾಗಿ ಟೀಕಿಸಿದ್ದಾರೆ.
ಲಂಡನ್ನಲ್ಲಿ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ. ದೇಶದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಸಹಾಯಕ್ಕೆ ಬರಬೇಕು ಎಂದು ಕೋರಿದ್ದಾರೆ. ಇದು ದೇಶಭಕ್ತರೊಬ್ಬರು ನೀಡುವ ಹೇಳಿಕೆಯೇ ಎಂದು ಪ್ರಶ್ನಿಸಿರುವ ಸಾಧ್ವಿ, "ಇದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ದೇಶದಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶವಿದೆ. ರಾಹುಲ್ ಗಾಂಧಿ ಅವರಿಗೆ ಅದು ಸಾಧ್ಯವಾಗುತ್ತಿಲ್ಲ ಎಂದಾದರೆ ಅವರನ್ನೇ ದೇಶದಿಂದ ಹೊರಗಿಡಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಿಮ್ಮ ತಾಯಿ ಇಟಲಿಯವರಾದ ಕಾರಣ ನೀವು ಭಾರತದವರಲ್ಲ ಎಂದು ನಾವು ಭಾವಿಸಿದ್ದೇವೆ" ಎಂದು ಹೇಳಿರುವ ಬಿಜೆಪಿ ಸಂಸದೆ, "ಸಂಸತ್ತು ಉತ್ತಮವಾಗಿ ಕೆಲಸ ಮಾಡುತ್ತಿದೆ. ಅದು ಸುಗಮವಾಗಿ ನಡೆದರೆ ಹೆಚ್ಚಿನ ಕೆಲಸಗಳು ನಡೆಯುತ್ತವೆ. ಇದು ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಿದೆ. ನಮಗೆ ಉಳಿಗಾಲವಿಲ್ಲ ಎಂದು ಅರಿತು ದೇಶದ ಬಗ್ಗೆಯೇ ಪಿತೂರಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಸ್ತಿತ್ವ ಕೊನೆಗೊಳ್ಳುವ ಹಂತದಲ್ಲಿದೆ. ಈಗ ಅವರ ಮನಸ್ಸೂ ಕೂಡ ಭ್ರಷ್ಟವಾಗುತ್ತಿದೆ" ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಲಂಡನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡಿದ್ದ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದು ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ:ಆರ್ಎಸ್ಎಸ್ ಮೂಲಭೂತವಾದಿ ಸಂಘಟನೆ: ಲಂಡನ್ನಲ್ಲಿ ರಾಹುಲ್ ಗಾಂಧಿ ಆರೋಪ