ರೈತರು ಮಕ್ಕಳು ಜಾಣರಾಗೋದು ಬೇಡವಾ? ರಾಜ್ಯ ಸರ್ಕಾರಕ್ಕೆ ಜೊಲ್ಲೆ ಪ್ರಶ್ನೆ
ಬೆಳಗಾವಿ:ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಸೋಮವಾರ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಜಾಥ ನಡೆಸಿದ ಬಿಜೆಪಿ ಶಾಸಕರು ಹಾಗೂ ರೈತ ಮೋರ್ಚಾ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕ ವಿದ್ಯುತ್ ದರ ಏರಿಕೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ರೈತ ವಿದ್ಯಾನಿಧಿ ಯೋಜನೆ, ಕೃಷಿ ಭೂಮಿ ಮಾರಾಟ ಕಾಯ್ದೆ, ಕಿಸಾನ್ ಸಮ್ಮಾನ್, ಭೂಸಿರಿ, ಕೃಷಿ ಭೂಮಿ ಮಾರಾಟ ಕಾಯ್ದೆ ಸೇರಿ ಇನ್ನಿತರ ಮಹತ್ವದ ಬಿಜೆಪಿ ಸರ್ಕಾರದ ಯೋಜನೆಗಳನ್ನು ರದ್ದು ಪಡಿಸುವ ಮೂಲಕ ರಾಜ್ಯದ ರೈತರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಹರಿಹಾಯ್ದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಈಟಿವಿ ಭಾರತ ಜೊತೆಗೆ ಮಾತನಾಡಿ, ಬಿಜೆಪಿ ಸರ್ಕಾರದ ರೈತ ಪರವಾಗಿದ್ದ 19 ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಮೊಟಕುಗೊಳಿಸಿದೆ. 11 ಲಕ್ಷ ರೈತ ಕುಟುಂಬದ ಮಕ್ಕಳು ರೈತ ವಿದ್ಯಾನಿಧಿ ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದರು. ಆದರೆ ಇದನ್ನು ಸ್ಥಗಿತಗೊಳಿಸಲಾಗಿದೆ. ರೈತರು ಮಕ್ಕಳು ಜಾಣರಾಗಿ, ಒಳ್ಳೆಯ ಉದ್ಯೋಗ ಪಡೆದುಕೊಳ್ಳುವುದು ಬೇಡವಾ? ನೀವು ಎಲ್ಲರಿಗೂ ಯೋಜನೆಗಳನ್ನು ಜಾರಿಗೆ ತನ್ನಿ ಆದರೆ, ರಾಜ್ಯದ ರೈತರನ್ನು ಏಕೆ ನಿರ್ಲಕ್ಷ್ಯ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ 19 ಯೋಜನೆಗಳನ್ನು ಪುನಃ ಆರಂಭಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಶಾಸಕರಾದ ಅಭಯ ಪಾಟೀಲ, ನಿಖಿಲ್ ಕತ್ತಿ, ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ಎಂಎಲ್ಸಿ ಮಹಾಂತೇಶ್ ಕವಟಗಿಮಠ ಸೇರಿ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ:ಶಿವಮೊಗ್ಗ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ