ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ: ರೇಸ್ಕೋರ್ಸ್ ರಸ್ತೆಯಲ್ಲಿ ರಾರಾಜಿಸುತ್ತಿವೆ ರಾಜಕೀಯ ನಾಯಕರ ಪೋಸ್ಟರ್‌ಗಳು - ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ನಗರದ ರೇಸ್ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಇಂದು ಮತ್ತೆ ನಾಳೆ ಕಾಂಗ್ರೆಸ್ ನೇತೃತ್ವದಲ್ಲಿ ವಿವಿಧ ಪ್ರತಿಪಕ್ಷಗಳ ಸಭೆ ನಡೆಯಲಿದೆ. ಎಎಪಿ, ಟಿಎಂಸಿ, ಡಿಎಂಕೆ, ಜೆಡಿಯು, ಎನ್ಸಿಪಿ, ಕೇರಳ ಕಾಂಗ್ರೆಸ್, ಆರ್ಎಸ್ಪಿ, ಅಕಾಲಿದಳ ಹಾಗು ಎಸ್ಪಿ ಸೇರಿದಂತೆ 24 ಪಕ್ಷಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ.
ಈ ಸಭೆಯ ಹಿನ್ನೆಲೆಯಲ್ಲಿ ರೇಸ್ಕೋರ್ಸ್ ರಸ್ತೆಯಲ್ಲಿ ವಿವಿಧ ಪಕ್ಷದ ನಾಯಕರ ದೊಡ್ಡ ಪೋಸ್ಟರ್ ಮತ್ತು ಬ್ಯಾನರ್ಗಳನ್ನು ಹಾಕಲಾಗಿದೆ. ಬೃಹತ್ ಪೋಸ್ಟರ್‌ಗಳು ನಾಯಕರನ್ನು ಸ್ವಾಗತಿಸುತ್ತಿವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವ ಪಡೆದಿರುವ ಸಭೆಯ ಪೂರ್ವ ಸಿದ್ಧತೆಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಕಾಂಗ್ರೆಸ್ ನಾಯಕರು ಪರಿಶೀಲನೆ ನಡೆಸಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಎಂ.ಕೆ. ಸ್ಟಾಲಿನ್, ನಿತೀಶ್ ಕುಮಾರ್, ಅರವಿಂದ್ ಕೇಜ್ರಿವಾಲ್ ಇನ್ನುಳಿದಂತೆ ತೇಜಸ್ವಿ ಯಾದವ್, ಶರದ್ ಪವಾರ್ ಸೇರಿದಂತೆ ಹಲವರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಪಕ್ಷಗಳ ಮೊದಲ ಸಭೆ ಬಿಹಾರದಲ್ಲಿ ನಡೆದಿತ್ತು. ಇದೀಗ ಎರಡನೇ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಇದನ್ನೂ ಓದಿ :ಬೆಂಗಳೂರಲ್ಲಿ ಇಂದಿನಿಂದ ಪ್ರತಿಪಕ್ಷಗಳ ಸಭೆ: ಪಾಲ್ಗೊಳ್ಳುವ ಪಕ್ಷಗಳು, ನಾಯಕರ ಪಟ್ಟಿ ಇಲ್ಲಿದೆ..