ಬಿಡದಿ ತುಮಕೂರು ಎರಡೂ ಕಡೆ ಮೆಟ್ರೊ, ಈ ವಿಚಾರದಲ್ಲಿ ಜಟಾಪಟಿ ಇಲ್ಲ: ಸಚಿವ ಪರಮೇಶ್ವರ್ - ಬಿಡದಿ ತುಮಕೂರು ಎರಡು ಕಡೆ ಮೆಟ್ರೊ
Published : Nov 11, 2023, 10:48 PM IST
ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಹಿನ್ನೆಲೆ ವಿಜಯೇಂದ್ರ ಅವರು ರಾಜಕೀಯ ಉದ್ದೇಶವಿಟ್ಟುಕೊಂಡು ಅನಾವಶ್ಯಕ ಟೀಕೆ ಟಿಪ್ಪಣಿ ಮಾಡುವುದು ಆರೋಗ್ಯಕರವಲ್ಲ. ಇದನ್ನ ಗಮನದಲ್ಲಿಟ್ಟುಕೊಳ್ಳಿ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕ ವಿಜಯೇಂದ್ರ ಅವರು ಉತ್ಸಾಹಿ ತರುಣ. ವಿರೋಧ ಪಕ್ಷದಲ್ಲಿ ಇದ್ದುಕೊಂಡು ರಚನಾತ್ಮಕವಾದ ಟೀಕೆ ಮಾಡಲಿ, ನಮ್ಮನ್ನು ಎಚ್ಚರಿಸಲಿ. ಇದಕ್ಕೆ ನಮ್ಮ ಭಿನ್ನಾಭಿಪ್ರಾಯವಿಲ್ಲ. ಜಾತಿ ಆಧಾರದ ಮೇಲೆ ಪಕ್ಷಗಳು ಈ ರೀತಿಯ ಹುದ್ದೆ ಕೊಡುವುದಿಲ್ಲ. ಆದರೆ, ಅದು ಚರ್ಚೆ ಆಗಬಹುದು. ಜಾತಿಯನ್ನು ಆಧಾರವಾಗಿಟ್ಟುಕೊಂಡು ಅಧಿಕಾರ ಕೊಡಲ್ಲ ಎಂದು ತಿಳಿಸಿದರು.
ಅವರ ಪಕ್ಷದ ಬಗ್ಗೆ ಮಾತನಾಡಲು ಆಗಲ್ಲ, ನಮ್ಮ ಪಕ್ಷದ್ದು ಏನಾದರೂ ಇದ್ದರೆ ಮಾತನಾಡಬಹುದು. ಬಿಡದಿ ತುಮಕೂರು ಎರಡು ಕಡೆ ಮೆಟ್ರೊ ಆಗ್ಬೇಕು. ಈ ವಿಚಾರದಲ್ಲಿ ಚಟಾಪಟಿ ಇಲ್ಲ. ಫಸ್ಟ್ ಸೆಕೆಂಡ್ ಪ್ರಶ್ನೆ ಇಲ್ಲ. ಬಿಡದಿವರೆಗೆ ಮೆಟ್ರೋ ವಿಸ್ತರಣೆ ಮಾಡಿದರೆ ಬೆಂಗಳೂರು ಬೆಳೆಯುತ್ತೆ. ಅದೇ ರೀತಿ ತುಮಕೂರು ಬೆಳೆದರೂ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲಂಡನ್ನಲ್ಲಿ ನೂರಾರು ಕಿಲೋ ಮೀಟರ್ವರೆಗೂ ಮೆಟ್ರೋ ಬೆಳೆದಿದೆ. ಅದೇನು ದೊಡ್ಡ ವಿಚಾರ ಅಲ್ಲ. ಮೆಟ್ರೊ ಬೆಳೆದರೆ ಸಾರಿಗೆಗೆ ಒಳ್ಳೆಯದು. ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ಯಾರೋ ಮುಚ್ಚು ಹಿಡ್ಕೊಂಡು ಓಡಾಡಿದರೆ ಪೊಲೀಸರು ಸುಮ್ಮನೆ ಬಿಡಲ್ಲ. ಅವರನ್ನ ಹಿಡಿದು ಒಳಗೆ ಹಾಕ್ತೇವಿ. ಅಂತವರು ಏನಾದ್ರೂ ಸ್ವಲ್ಪದ್ರಲ್ಲಿ ತಪ್ಪಿಸಿಕೊಂಡಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ. ಬೆಂಗಳೂರಲ್ಲಿ ಕಮಿಷನರ್ ಎಲ್ಲ ರೌಡಿಗಳನ್ನು ಮಾನಿಟರ್ ಮಾಡುತ್ತಿದ್ದಾರೆ. ಅದೇ ರೀತಿ ತುಮಕೂರಲ್ಲಿ ಮಾಡ್ತೀವಿ ಎಂದು ತಿಳಿಸಿದರು.
ಇದನ್ನೂಓದಿ:ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು