ಇಳಕಲ್ ಸೀರೆಯಲ್ಲಿ ನೇಕಾರನ ಕೈಚಳಕ: ಚಂದ್ರಯಾನ 3ರ ಯಶಸ್ಸಿಗೆ ಶುಭ ಹಾರೈಕೆ - indian flag in Ilkal saree
ಬಾಗಲಕೋಟೆ: ಇಂದಿನ ಆಧುನಿಕ ಯುಗದ ಭರಾಟೆಯಿಂದಾಗಿ ಇಳಕಲ್ ಕಾಟನ್ ಸೀರೆ ಉಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇಳಕಲ್ ಸೀರೆಗೆ ಇನ್ನಷ್ಟು ಮೆರಗು ತರುವ ನಿಟ್ಟಿನಲ್ಲಿ, ಬೇಡಿಕೆ ಹೆಚ್ಚಿಸುವ ಪ್ರಯತ್ನದಲ್ಲಿ ಯುವ ನೇಕಾರರೋರ್ವರು ತಮ್ಮ ಕಲೆಯನ್ನು ಬಳಸಿದ್ದಾರೆ. ಇಳಕಲ್ ಪಟ್ಟಣದ ನಿವಾಸಿ ಮೇಘರಾಜ್ ಗುದ್ದಟ್ಟಿ ಇಳಕಲ್ ಸೀರೆ ನೇಯುತ್ತಾ, ತಮ್ಮ ಪತ್ರಿಭೆ ಪ್ರದರ್ಶನ ಮಾಡಿದ್ದಾರೆ. ಇಳಕಲ್ ಸೀರೆ ಪ್ರಚಾರದ ಜೊತೆಗೆ ಕಲೆ ಬೆಳೆಸಲು ಪ್ರಯತ್ನಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ, ಸೀರೆಯಲ್ಲಿ ಭಾರತ ಧ್ವಜ ಚಿತ್ರವನ್ನು ನೇಯ್ದು ಗಮನ ಸೆಳೆದಿದ್ದಾರೆ. ಅಲ್ಲದೇ ಕೋಟ್ಯಂತರ ಭಾರತೀಯರು ಕಾತರದಿಂದ ಕಾಯುತ್ತಿರುವ ಇಸ್ರೋ ರಾಕೆಟ್ ಇದೇ ಆಗಸ್ಟ್ 23ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಗಲಿದೆ. ಇಸ್ರೋಗೆ ಜಯ ಸಿಗಲಿ ಎಂದು ಜಗತ್ಪ್ರಸಿದ್ಧ ಇಳಕಲ್ ಸೀರೆಯಲ್ಲಿ ವಿಭಿನ್ನವಾಗಿ ಶುಭ ಕೋರಿದ್ದಾರೆ.
ಈ ಹಿಂದೆ ರಾಮಮಂದಿರ, ಪ್ರಧಾನ ಮಂತ್ರಿ ಮೋದಿ ಅವರ ಭಾವ ಚಿತ್ರ, ಭಾರತಮಾತೆಯ ಚಿತ್ರ ಸೇರಿದಂತೆ ದೇಶಾಭಿಮಾನ ಮೂಡಿಸುವ ಚಿತ್ರಗಳನ್ನು ಸೀರೆಯಲ್ಲಿ ನೇಯುವ ಮೂಲಕ ಗಮನ ಸೆಳೆದಿದ್ದರು. ಸದ್ಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಕಳೆದ ಒಂದು ವಾರದಿಂದ ರಾಷ್ಟ್ರಧ್ವಜ ಹಾಗೂ ಇಸ್ರೋ ರಾಕೆಟ್ ಚಿತ್ರವನ್ನು ನೇಯ್ದಿದ್ದಾರೆ.
ಆಧುನಿಕ ಜೀವನಶೈಲಿ ಹಿನ್ನೆಲೆ, ಸಂಪ್ರದಾಯ ಉಡುಗೆ ಇಳಕಲ್ ಸೀರೆ ಮಾರಾಟ ಕಡಿಮೆ ಆಗುತ್ತಿದೆ. ಇದರಿಂದ ನೇಕಾರರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಮೇಘರಾಜ್ ಗುದ್ದಟ್ಟಿ ಅವರು ವಿಭಿನ್ನವಾಗಿ ಇಳಕಲ್ ಸೀರೆ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಇಳಕಲ್ ಮಾರುಕಟ್ಟೆ ಬೆಳೆಯಲಿ, ನೇಕಾರರಿಗೆ ಉತ್ತೇಜನ ಸಿಗಲಿ ಎಂದು ಆಶಿಸೋಣ.
ಇದನ್ನೂ ಓದಿ:ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಚಿರತೆ ದಾಳಿ: 6 ವರ್ಷದ ಮಗು ಸಾವು