ಬೆಂಗಳೂರು ಬಂದ್: ನಗರದಲ್ಲಿ ಎಂದಿನಂತೆ ಬಿಎಂಟಿಸಿ ಬಸ್, ಖಾಸಗಿ ವಾಹನ ಸಂಚಾರ - ಬಿಎಂಟಿಸಿ ಸ್ಪಷ್ಟನೆ
Published : Sep 26, 2023, 7:39 AM IST
|Updated : Sep 26, 2023, 9:36 AM IST
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರೈತ ಸಂಘಟನೆಗಳು, ಕನ್ನಡಪರ ಹೋರಾಟಗಾರರು ಸೇರಿದಂತೆ ಹಲವು ಸಂಘಟನೆಗಳು ಇಂದು ಬೆಂಗಳೂರು ಬಂದ್‍ಗೆ ಕರೆ ನೀಡಿವೆ. ಆದರೆ ಎಂದಿನಂತೆ ನಗರದಲ್ಲಿ ಬಸ್ ಸಂಚಾರ ಇರಲಿದೆ ಎಂದು ಬಿಎಂಟಿಸಿ ಸ್ಪಷ್ಟನೆ ನೀಡಿದೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಬಿಎಂಟಿಸಿ, ಕಾವೇರಿ ನೀರಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಬಂದ್‍ಗೆ ಕರೆ ನೀಡಿವೆ. ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ಮಾರ್ಗಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದೆ.
ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನೌಕರರ ಸಂಘದಿಂದ ಬಂದ್‍ಗೆ ಬೆಂಬಲ ನೀಡುವುದಾಗಿ ತಿಳಿಸಲಾಗಿತ್ತು. ಮಂಗಳವಾರ ಬಿಎಂಟಿಸಿ ಬಸ್‍ಗಳನ್ನು ರಸ್ತೆಗೆ ಇಳಿಸಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಾವು ಬೆಂಬಲ ನೀಡುತ್ತೇವೆ. ನಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಿದರೂ ಪರವಾಗಿಲ್ಲ. ಬೆಳಗ್ಗೆ 6 ರಿಂದ ಸಂಜೆ 6ವರೆಗೆ ಬಸ್‍ಗಳನ್ನು ರಸ್ತೆಗೆ ಇಳಿಸಲ್ಲ ಎಂದು ಸಂಘ ಹೇಳಿತ್ತು. ಆದರೆ ಇದೀಗ ಬಿಎಂಟಿಸಿ ಎಂದಿನಂತೆ ಕಾರ್ಯಾಚರಿಸಲಿದೆ ಎಂದು ಸ್ಪಷ್ಟಪಡಿಸಿದೆ.
ಇಂದು ಬೆಳಗ್ಗೆ ಬಿಎಂಟಿಸಿ, ಕೆಎಸ್ಆರ್ಟಿಸಿ ಮಾತ್ರವಲ್ಲದೇ ಖಾಸಗಿ ವಾಹನಗಳು ಸಹ ಸಂಚರಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂತು. ಬಂದ್‍ಗೆ ಕರೆ ನೀಡಿರುವುದರ ನಡುವೆಯೂ ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಟೌನ್ ಹಾಲ್ ಸೇರಿದಂತೆ ಹಲವೆಡೆ ಬಸ್‌ಗಳು, ಆಟೋಗಳು, ಗೂಡ್ಸ್ ವಾಹನ ಸೇರಿದಂತೆ ಅನೇಕ ವಾಹನಗಳ ಓಡಾಟ ಸಾಗುತ್ತಿದೆ.
10 ಗಂಟೆಯ ನಂತರ ಬಂದ್ ಬಿಸಿ ಸಾಧ್ಯತೆ: ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಟೌನ್ ಹಾಲ್ ಬಳಿ ಜಮಾಯಿಸಲಿರುವ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಗೆ ಮುಂದಾಗಿದ್ದಾರೆ. ಬೆಳಗ್ಗೆ 10 ಗಂಟೆಯ ನಂತರ ಬಂದ್ ಬಿಸಿ ಹೆಚ್ಚಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ಬಲವಂತದ ಬಂದ್ ಮಾಡಿಸುವಂತಿಲ್ಲ ಎಂದು ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಬಂದ್ ವೇಳೆ ಅಗತ್ಯ ಸುರಕ್ಷತಾ ಕ್ರಮ ಸರ್ಕಾರದ ಕರ್ತವ್ಯ : ಹೈಕೋರ್ಟ್