ಕಿರಾಣಿ ಅಂಗಡಿಯ ಬೀಗ ಮುರಿಯಲು ಯತ್ನಿಸಿದ ಕರಡಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಕರಡಿಗಳ ಓಡಾಟ
ನೀಲಗಿರಿ (ತಮಿಳುನಾಡು): ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರಡಿಗಳ ಓಡಾಟ ಹೆಚ್ಚಿದೆ. ಜನವಸತಿ ಪ್ರದೇಶಗಳಿಗೂ ಕರಡಿಗಳು ಲಗ್ಗೆ ಇಡುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಇದೀಗ ಕರಡಿಯೊಂದು ಕಿರಾಣಿ ಅಂಗಡಿಯ ಬೀಗ ಮುರಿಯಲು ಯತ್ನಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಲ್ಲಿನ ಕುನೂರಿನ ವೆಲ್ಲಿಂಗ್ಟನ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಏಪ್ರಿಲ್ 10ರಂದು ರಾತ್ರಿ ಕರಡಿಯೊಂದು ಕಿರಾಣಿ ಅಂಗಡಿ ಬಳಿಗೆ ಬಂದು ಬಹಳ ಸಮಯದಿಂದ ಬೀಗ ಮುರಿಯಲು ಯತ್ನಿಸುತ್ತಿದೆ. ಬೀಗ ಮುರಿಯಲು ಕರಡಿ ಎರಡು ಕಾಲುಗಳ ಮೇಲೆ ಎದ್ದು ನಿಂತಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಸತತ ಪ್ರಯತ್ನದ ಹೊರತಾಗಿಯೂ ಕರಡಿ ಅಂಗಡಿಯ ಬೀಗವನ್ನು ಮುರಿಯಲು ಸಾಧ್ಯವಾಗಿಲ್ಲ.
ಏತನ್ಮಧ್ಯೆ, ಜನವಸತಿ ಪ್ರದೇಶಗಳಲ್ಲಿ ಕರಡಿಗಳ ಓಡಾಟದಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಕರಡಿಗಳನ್ನು ಮರಳಿ ಕಾಡಿಗೆ ಓಡಿಸಬೇಕು. ಇಲ್ಲವೇ ಅವುಗಳನ್ನು ಸೆರೆ ಹಿಡಿದು ಮುದುಮಲೈ ಅರಣ್ಯಕ್ಕೆ ಬಿಡಬೇಕೆಂದು ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಈ ಹಿಂದೆ ಕೋಟಗಿರಿ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಕರಡಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಮುದುಮಲೈ ಅರಣ್ಯ ಪ್ರದೇಶದಲ್ಲಿ ಬಿಟ್ಟಿತ್ತು.
ಇದನ್ನೂ ಓದಿ:ತುಮಕೂರು: ಬೋನಿಗೆ ಬಿದ್ದ ಮರಿ ಹುಡುಕಿ ಬಂದ ತಾಯಿ ಕರಡಿಯೂ ಸೆರೆ