ಶಿವಮೊಗ್ಗ: ನಾಗಸಮುದ್ರ ಗ್ರಾಮದಲ್ಲಿ ಕರಡಿ ಓಡಾಟ - ಅರಣ್ಯಾಧಿಕಾರಿ ಜಗದೀಶ್
Published : Dec 20, 2023, 7:19 PM IST
ಶಿವಮೊಗ್ಗ: ಭದ್ರಾವತಿ ತಾಲೂಕು ನಾಗಸಮುದ್ರ ಗ್ರಾಮದಲ್ಲಿ ಕರಡಿಯೊಂದು ಇಂದು ಬೆಳಿಗ್ಗೆ ಓಡಾಡಿದೆ. 5 ಗಂಟೆಯ ವೇಳೆಗೆ ಕರಡಿ ಗ್ರಾಮ ಪ್ರವೇಶಿಸಿದೆ. ತುಂಗಾಭದ್ರಾ ನದಿ ಕಡೆಯಿಂದ ಗ್ರಾಮಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ಗ್ರಾಮಸ್ಥರು ಯಾರೂ ಹೊರಗಿರದ ಕಾರಣ ಕರಡಿ ಕಂಡುಬಂದಿಲ್ಲ. ಆದರೆ ಸಮುದಾಯ ಭವನದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಓಡಾಟದ ದೃಶ್ಯ ಸೆರೆಯಾಗಿದೆ. ಗ್ರಾಮಸ್ಥರು ತಮ್ಮ ಜಮೀನು, ಬೇರೆ ಗ್ರಾಮಗಳಿಗೆ ಓಡಾಡಲು ಭಯಪಡುವಂತಾಗಿದೆ.
ಗ್ರಾಮಸ್ಥ ಮೋಹನ್ ಮಾತನಾಡಿ, ನಾಗಸಮುದ್ರ ಹಾಗೂ ಗುಡ್ಡದ್ದಹಳ್ಳಿಯ ಗ್ರಾಮದ ನಡುವೆ ಕರಡಿ ಓಡಾಟ ನಡೆಸುತ್ತಿದೆ. ಈ ಭಾಗದಲ್ಲಿ ನದಿ ಹಾಗೂ ಗುಡ್ಡ, ಕುರುಚಲು ಗಿಡಗಳಿವೆ. ಇದರಿಂದಾಗಿ ಇಲ್ಲಿ ಓಡಾಟ ನಡೆಸುತ್ತಿದೆ. ಅರಣ್ಯಾಧಿಕಾರಿಗಳು ಬಂದು ನಮ್ಮ ಗ್ರಾಮದಲ್ಲಿ ಜಾಗೃತಿ ಉಂಟುಮಾಡಿದ್ದಾರೆ ಎಂದರು.
ಚನ್ನಗಿರಿ ತಾಲೂಕು ಮಾವಿನಕಟ್ಟೆ ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿ, ಕರಡಿ ಚಲನವಲನದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಹೆಜ್ಜೆ ಗುರುತು ಸೇರಿದಂತೆ ಇತರೆ ಅಂಶಗಳನ್ನು ಕಲೆ ಹಾಕುವ ಪ್ರಯತ್ನ ಮಾಡಿದ್ದಾರೆ. ನಾಗಸಮುದ್ರ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ ಓಡಾಟ ಇರುವ ಕುರಿತು ಜಾಗೃತಿ ಮೂಡಿಸಿದ್ದಾರೆ. ಗ್ರಾಮದಲ್ಲಿ ಕರಡಿ ಸೆರೆ ಹಿಡಿಯಲು ಗೇಜ್ ಇಡಲಾಗಿದೆ ಎಂದು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಜಗದೀಶ್ 'ಈಟಿವಿ ಭಾರತ್'ಗೆ ತಿಳಿಸಿದರು.
ಇದನ್ನೂ ಓದಿ:ಬಾಗಿಲು ಮುರಿದು ಶಾಲೆಯೊಳಗೆ ನುಗ್ಗಿದ ಕರಡಿ: ಸಿಸಿಟಿವಿ ವಿಡಿಯೋ