ಗೌಡರ ಹುಟ್ಟುಹಬ್ಬಕ್ಕೆ ಮನೆಗೆ ತೆರಳಿ ಶುಭಾಶಯ ಕೋರಿದ ಬೊಮ್ಮಾಯಿ - ಗೋವಿಂದ ಕಾರಜೋಳ
ಬೆಂಗಳೂರು:ಹಂಗಾಮಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಸಂಜೆ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ತೆರಳಿ ದೇವೇಗೌಡರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ತಮ್ಮ ನಿವಾಸಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿ ಅವರನ್ನು ದೇವೇಗೌಡರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆ ದೇವೇಗೌಡರಿಗೆ ಶಾಲು ಹಾಕಿ, ಹೂ ಗುಚ್ಛ ನೀಡಿ ಬೊಮ್ಮಾಯಿ ಅವರು ಹುಟ್ಟು ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ, ಹೆಚ್ಡಿ ರೇವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಹಾಜರಿದ್ದರು. ಕೆಲಹೊತ್ತು ವಿಧಾನಸಭೆ ಚುನಾವಣೆ ಹಾಗೂ ರಾಜ್ಯ ರಾಜಕಾರಣದ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮೂಲಕ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅವರು ಇಟ್ಟ ಹೆಜ್ಜೆಗಳು ನಮ್ಮಂಥ ನಾಯಕರಿಗೆ ಪ್ರೇರಕ ಶಕ್ತಿಯಾಗಿದೆ. ದೇವರು ಅವರಿಗೆ ಆಯುರಾರೋಗ್ಯ ಪ್ರಾಪ್ತಿ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಕೆಶಿ ತಿಳಿಸಿದ್ದಾರೆ.
ಇದನ್ನೂ ಓದಿ:'ಕರೆಂಟ್ ಬಿಲ್ ನಾವು ಕಟ್ಟಲ್ಲ'.. ಬೆಸ್ಕಾಂ ಸಿಬ್ಬಂದಿಯೊಂದಿಗೆ ಮಹಿಳೆ ಮಾತಿನ ಚಕಮಕಿ