ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮದರಸಾ ಬಂದ್: ಬಸನಗೌಡ ಪಾಟೀಲ್ ಯತ್ನಾಳ್ - Basanagowda Patil Yatnal reaction on Madarasa
ಬೆಳಗಾವಿ: ಅಸ್ಸೋಂ ರಾಜ್ಯದಲ್ಲಿ ಮದರಸಾ ಬಂದ್ ಮಾಡಿದ ರೀತಿಯಲ್ಲಿಯೇ ನಮ್ಮ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ನಾವು ರಾಜ್ಯದಲ್ಲಿ ಮದರಸಾ ಬಂದ್ ಮಾಡಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಶುಕ್ರವಾರ ಬೆಳಗಾವಿಯ ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದ ಬಳಿ ಶಿವಚರಿತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅಸ್ಸೋಂ ರಾಜ್ಯದ ಮುಖ್ಯಮಂತ್ರಿ ಹೀಮಂತ್ ಬಿಸ್ವಾ ಶರ್ಮ ಅವರ ತರ ನಾವು ರಾಜ್ಯದಲ್ಲಿರುವ ಸಂಪೂರ್ಣ ಮದರಸಾ ಬಂದ ಮಾಡುತ್ತೇವೆ ಎಂದು ಹೇಳಿದರು. ಮುಸ್ಲಿಮರಿಗೆ ಇರುವುದಕ್ಕೆ ಹಲವಾರು ರಾಷ್ಟ್ರಗಳು ಇದ್ದಾರೆ, ಆದರೆ ಹಿಂದೂಗಳು ಇರುವುದಕ್ಕೆ ಭಾರತ ರಾಷ್ಟ್ರ ಒಂದೇ ಇರುವುದು, ಕಳೆದ ಎಂಟು ವರ್ಷಗಳಿಂದ ದೇಶ ಸುರಕ್ಷಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದರು.
ವಿಜಯಪುರದಲ್ಲಿ ಹಲವು ರಸ್ತೆಗಳ ಹೆಸರು ಬದಲಾವಣೆ ಮಾಡಲಾಗಿದೆ, ಬದಲಾವಣೆ ನಂತರ ಸ್ವಾಂತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಮರುನಾಮಕರಣ ಮಾಡಲಾಗಿದೆ. ನಾವು ಎಲ್ಲರೂ ಹಿಂದೂಗಳಾಗಿ ಉಳಿದರೆ ಮಾತ್ರ ಹಿಂದೂ ದೇಶ ಉಳಿಯುವುದಕ್ಕೆ ಸಾಧ್ಯ. ಇಲ್ಲವಾದರೆ ಉರ್ದು ಕಲಿಯಬೇಕಾಗುತ್ತದೆ ಎಂದು ಹೇಳುತ್ತಾ ಜನರನ್ನು ಹಿಂದೂ ಕಲಿಯುತ್ತಿರಾ ಅಥವಾ ಉರ್ದು ಕಲಿಯುತ್ತಿರಾ ಎಂದು ಪ್ರಶ್ನೆ ಮಾಡಿದರು. ಪ್ರಾಂತ್ಯವಾರು ಏನಾದರೂ ಭಾಷೆ ಮಾತನಾಡಿ ದೇಶ ಎಂದರೆ ಹಿಂದುತ್ವ ಒಂದೇ. ನೀವು ಮರಾಠಿ, ಕನ್ನಡ ಎಂಬುದನ್ನು ಇನ್ನು ಮುಂದೆ ಬಿಡಿ ಎಲ್ಲರೂ ಹಿಂದುತ್ವದ ಬಗ್ಗೆ ಮಾತನಾಡಿ ಎಂದು ಜನರಿಗೆ ಕರೆ ಕೊಟ್ಟರು.