ಮನೆಯಲ್ಲಿ ಒಂದು ಕೋಟಿ ಮೌಲ್ಯದ ನಿಷೇಧಿತ 1000 ಮುಖ ಬೆಲೆಯ ನೋಟುಗಳು ಪತ್ತೆ: ವಿಡಿಯೋ - ರಿಯಲ್ ಎಸ್ಟೇಟ್ ಮಾಫಿಯಾ
ಕಾಸರಗೋಡು (ಕೇರಳ):ದೇಶದಲ್ಲಿ ಐನೂರು ಮತ್ತು ಒಂದು ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳ ರದ್ದು ಮಾಡಿ ಸುಮಾರು ಏಳು ವರ್ಷಗಳು ಆಗುತ್ತಿದೆ. ಆದರೆ, ಕೇರಳದ ಕಾಸರಗೋಡಿನಲ್ಲಿ ಇದೀಗ ಒಂದು ಕೋಟಿ ಮೌಲ್ಯದ ನಿಷೇಧಿತ ಒಂದು ಸಾವಿರ ರೂಪಾಯಿ ಮುಖ ಬೆಲೆ ನೋಟುಗಳು ಪತ್ತೆಯಾಗಿವೆ. ಒಟ್ಟು ಐದು ಮೂಟೆಯ ಕರೆನ್ಸಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡು ಜಿಲ್ಲೆಯ ಮುಂಡ್ಯತಟುಕ ಮೂಲದ ಶಾಫಿ ಎಂಬುವವರ ಜನವಸತಿ ಇಲ್ಲದ ಮನೆಯಲ್ಲಿ ಈ ನೋಟುಗಳು ಪತ್ತೆಯಾಗಿವೆ. ರಾತ್ರಿ ವೇಳೆ ಅಪರಿಚಿತರು ಬಂದು ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ, ಬತಿಯಡುಕ್ಕ ಸಬ್ ಇನ್ಸ್ಪೆಕ್ಟರ್ ವಿನೋದ್ ಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆದಿದೆ.
ಇದೇ ವೇಳೆ ನೋಟುಗಳ ಕಟ್ಟುಗಳ ಜತೆಗೆ ನೋಟಿನ ಗಾತ್ರದ ಕಾಗದದ ಕಟ್ಟುಗಳೂ ಪತ್ತೆಯಾಗಿವೆ. ಈ ಮನೆಯಲ್ಲಿ ತಂಗಿರುವವರು ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬತಿಯಡುಕ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಹೊಸ ವಿದೇಶಿ ವ್ಯಾಪಾರ ನೀತಿ ಬಿಡುಗಡೆ: ರಫ್ತು ಪ್ರಮಾಣ 2 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿ