ಆಡಳಿತ ಮಂಡಳಿಯ ಎಡವಟ್ಟು: ಶಾಲೆಯನ್ನೇ ಸೀಜ್ ಮಾಡಿದ ಬ್ಯಾಂಕ್ ಸಿಬ್ಬಂದಿ - ಆಡಳಿತ ಮಂಡಳಿಯ ಎಡವಟ್ಟು
ಬಳ್ಳಾರಿ:ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿರುವ ರಾಜೀವ್ ಗಾಂಧಿ ಸ್ಮಾರಕ ವಿದ್ಯಾ ಸಂಸ್ಥೆಯ ಶಾಲಾ ಆಡಳಿತ ಮಂಡಳಿ ಮಾಡಿದ ಸಾಲಕ್ಕೆ ಬ್ಯಾಂಕ್ ಸಿಬ್ಬಂದಿ ಶಾಲೆಯನ್ನೇ ಸೀಜ್ ಮಾಡಿದ ಘಟನೆ ನಡೆದಿದೆ. ಪರಿಣಾಮ ನೂತನ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ಮರದ ಕೆಳಗೆ ಕುಳಿತು ಪಾಠ ಕೇಳುವ ದುಃಸ್ಥಿತಿ ಎದುರಾಗಿದೆ. ಆಡಳಿತ ಮಂಡಳಿ ಮಾಡಿರುವ ಎಡವಟ್ಟಿನಿಂದ ಈ ಸಮಸ್ಯೆ ಎದುರಾಗಿದೆ. ಶಾಲೆ ಸೀಜ್ ಆಗಿರುವ ಹಿನ್ನೆಲೆ ಮಕ್ಕಳು ಶಾಲೆಯ ಹೊರಗಡೆ ಮರದ ಕೆಳಗೆ ಕುಳಿತು ಪಾಠ ಕೇಳುವ ಸ್ಥಿತಿ ಬಂದಿದೆ.
ಈ ಸಂಸ್ಥೆ ಮುಖ್ಯಸ್ಥರಾದ ಎಂ.ಸವಿತಾ, ಎಂ.ಕೃಷ್ಣಕಿಶೋರ ರೆಡ್ಡಿ, ಎಂ.ಸತ್ಯನಾರಾಯಣ ರೆಡ್ಡಿ ಹಾಗೂ ಇನ್ನಿತರರು ಶಾಲಾ ಕಟ್ಟಡವನ್ನು ಅಡವಿಟ್ಟು ಹೈದರಾಬಾದಿನ ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದರು. ಆದರೆ, ಕಂತುಗಳನ್ನು ಕಟ್ಟದೇ ಮತ್ತು ಸಾಲ ಮರುಪಾವತಿ ಮಾಡದ ಕಾರಣ ನ್ಯಾಯಾಲಯದಿಂದ ಆದೇಶ ತಂದ ಬ್ಯಾಂಗ್ ಸಿಬ್ಬಂದಿ ಶಾಲಾ ಕಟ್ಟಡಕ್ಕೆ ಬೀಗ ಹಾಕಿಸಿದ್ದಾರೆ.
ಆಡಳಿತ ಮಂಡಳಿ ಹಾಗೂ ಬ್ಯಾಂಕ್ ಸಿಬ್ಬಂದಿಯ ವ್ಯವಹಾರದಿಂದಾಗಿ ಇಂದು ಮಕ್ಕಳು ಪರದಾಡುವಂತಾಗಿದೆ. ಮಕ್ಕಳನ್ನು ಹೊರಗಡೆ ಕೂರಿಸದೇ ಬೇರೆಡೆ ವ್ಯವಸ್ಥೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಒಂದು ವೇಳೆ ವ್ಯವಸ್ಥೆ ಮಾಡದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ಕೂಡ ನೀಡಿದೆ.
ಸ್ಥಳೀಯ ಪ್ರಸಾದ್ ಎಂಬುವರು ಮಾತನಾಡಿ, ''ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬ್ಯಾಂಕ್ ಸಬ್ಬಂದಿಯ ನಡುವೆ ಏನೇ ವ್ಯವಹಾರ ನಡೆದಿರಲಿ ಆದರೆ, ಮಕ್ಕಳ ಪಾಠಕ್ಕೆ ತೊಂದರೆ ಆಗಬಾರದು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.