ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ ಬಳ್ಳಾಲರಾಯನ ದುರ್ಗ ಮತ್ತು ರಾಣಿ ಝರಿ: ವಿಡಿಯೋ - ಬಳ್ಳಾಲರಾಯನ ದುರ್ಗ
ಚಿಕ್ಕಮಗಳೂರು: ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣೋ ನೈಜ ಸ್ವರ್ಗದ ಚೆಲುವು. ದಿಟ್ಟಿಸಿ ನೋಡಿದರೆ ಕೊನೆಯೇ ಇಲ್ಲವೇನೋ ಎಂಬಂತೆ ಕಾಣೋ ಕೋಟೆಯ ಬೃಹದಾಕಾರದ ಗೋಡೆ. ಪ್ರತೀ ಹೆಜ್ಜೆಯಲ್ಲೂ ಪ್ರವಾಸಿಗರಿಗೆ ನಿಸರ್ಗದ ಮಡಿಲು ಸವಾಲು ಹಾಕುತ್ತಿದೆ. ಹೌದು, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಪ್ರಕೃತಿ ಸೌಂದರ್ಯದ ಖಣಿ.. ಪಶ್ಚಿಮ ಘಟ್ಟದ ಅನನ್ಯ ಅರಣ್ಯ ಸಂಪತ್ತು ಹೊಂದಿರುವ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮಳೆ ಬಂತೆಂದರೆ ಪರಿಸರದಲ್ಲಿ ರಮಣೀಯತೆ ಸೃಷ್ಟಿಯಾಗುತ್ತದೆ. ಈ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ರಮಣೀಯ ಸ್ಥಳಗಳಲ್ಲಿ ಒಂದಾದ ಬಳ್ಳಾಲರಾಯನ ದುರ್ಗ ಮತ್ತು ರಾಣಿ ಝರಿಯ ಈ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಇದು ಚಿಕ್ಕಮಗಳೂರು - ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಬಲ್ಲಾಳರಾಯನ ದುರ್ಗದ ಕೋಟೆ. ಮೂಡಿಗೆರೆ ತಾಲೂಕಿನಲ್ಲಿದೆ. ರುದ್ರ ರಮಣೀಯವಾಗಿ ಕಾಣುವ ಈ ತಾಣವನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರ್ತಾರೆ. ಅದರಲ್ಲೂ ಟ್ರೆಕ್ಕಿಂಗ್ ಪ್ರಿಯರಿಗಂತೂ ಬಲ್ಲರಾಯನ ಕೋಟೆ ಹತ್ತೋದು ಎಂದರೆ ಎಲ್ಲಿಲ್ಲದ ಉತ್ಸಾಹ ಹಾಗೂ ಸವಾಲು. ದುರ್ಗದಹಳ್ಳಿಯ ಎಂಡ್ ಪಾಯಿಂಟ್ನಲ್ಲಿ ವಾಹನ ನಿಲ್ಲಿಸಿ ಅರ್ಧ ಕಿ.ಮೀ. ಸಾಗಿದರೆ ವ್ಹೀವ್ ಪಾಯಿಂಟ್ ಕಣ್ಣಿಗೆ ಅಪ್ಪಳಿಸುತ್ತೆ. ಈ ಜಾಗದಲ್ಲಿ ನಿಂತು ನೋಡಿದ್ರೆ ಸ್ವರ್ಗಕ್ಕೆ ಮೂರೇ ಗೇಣು ಅನ್ನುವ ರೀತಿ ಭಾಸವಾಗುತ್ತದೆ. ಸುತ್ತಲಿನ ಹಚ್ಚ ಹಸಿರಿನ ವನರಾಶಿ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತೆ. ಇಲ್ಲಿಗೆ ಬರೋ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಂಡು ನಿಸರ್ಗದ ಮಡಿಲಲ್ಲಿ ಕುಣಿದು ಕುಪ್ಪಳಿಸುತ್ತಾರೆ.
ನೇತ್ರಾವತಿ ಪೀಕ್ಗೆ ಪ್ರವಾಸಿಗರನ್ನು ನಿರ್ಬಂಧಿಸಿರುವ ಹಿನ್ನೆಲೆ, ಮೂಡಿಗೆರೆ ತಾಲೂಕಿನ ಬಲ್ಲಾಳ ರಾಯನ ದುರ್ಗ ಮತ್ತು ರಾಣಿ ಝರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಬಲ್ಲಾಳರಾಯನ ದುರ್ಗದ ತುದಿಯಲ್ಲಿ ನಿಂತು ಮಂಜಿನ ನಡುವೆ ಕಾಣುವ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಗ್ರಾಮಗಳನ್ನು ನೋಡಿ ಪ್ರವಾಸಿಗರು ಪುಳಕಿತರಾಗುತ್ತಿದ್ದಾರೆ. ಕ್ಷಣಕ್ಕೊಮ್ಮೆ ಬದಲಾಗುವ ತಂಪು ವಾತಾವರಣದ ಜೊತೆ ಪ್ರಕೃತಿ ಸಮೃದ್ಧತೆಯನ್ನು ಪ್ರವಾಸಿಗರು ಆಸ್ವಾದಿಸುತ್ತಿದ್ದಾರೆ.
ಇದನ್ನೂ ಓದಿ: ಕಾಫಿನಾಡು ಬಲ್ಲಾಳರಾಯನ ದುರ್ಗಕ್ಕೆ ದುರ್ಗದಹಳ್ಳಿ ಗ್ರಾಮಸ್ಥರಿಂದ ತಡೆ