ಸಿಎಂ ಆಯ್ಕೆ ಪಕ್ಷದ ಹೈಕಮಾಂಡ್ ನಿರ್ಧಾರ: ಬಿ ಎಸ್ ಯಡಿಯೂರಪ್ಪ - b s yadiyurappa
ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಬಿಜೆಪಿ ಮುಖಂಡರೋರ್ವರ ಪುತ್ರನ ವಿವಾಹದಲ್ಲಿ ಭಾಗವಹಿಸಲು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಆಗಮಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ, ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ನಿರ್ಧಾರವನ್ನು ಪಕ್ಷ, ಪ್ರಧಾನ ಮಂತ್ರಿಯವರು ಹಾಗೂ ಹೈಕಮಾಂಡ್ ತೆಗೆದುಕೊಳ್ಳುತ್ತಾರೆ. ಅವರ ಆಯ್ಕೆಯೇ ಅಂತಿಮ ತೀರ್ಮಾನ. ಹೈಕಮಾಂಡ್ ಯಾರನ್ನೇ ಸಿಎಂ ಮಾಡಿದರೂ ಕೂಡ ನಮಗೆ ಅಭ್ಯಂತರವಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 140 ಸೀಟು ಬಿಜೆಪಿಗೆ ಬರುತ್ತದೆ. ಆ ಮೂಲಕ ನಮ್ಮದೇ ಸರ್ಕಾರ ಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಬೇರೆ ಬೇರೆ ಹೇಳಿಕೆ ನೀಡುವುತ್ತಿರುವುದಕ್ಕೆ ಯಾವುದೇ ಅರ್ಥವಿಲ್ಲ, ಅದಕ್ಕೆ ಬೆಲೆ ಕೊಡಲು ಸಾಧ್ಯವಿಲ್ಲ ಎಂದರು. ಬಿಜೆಪಿಯೆಂದರೆ ಲಿಂಗಾಯತ ಎನ್ನುವ ಭಾವನೆ ಇತ್ತು, ಈಗ ಬ್ರಾಹ್ಮಣರು ಎಂದು ಬಿಂಬಿಸಲು ಹೊರಟಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ನೂರಕ್ಕೆ 90ರಷ್ಟು ನಮ್ಮ ಲಿಂಗಾಯತರು ಬಿಜೆಪಿ ಜೊತೆ ಇದ್ದಾರೆ. ಅವರೊಂದಿಗೆ ನಾನೂ ಇದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್ ಯಡಿಯೂರಪ್ಪ ಹೆಸರನ್ನು ಇಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಹೆಸರು ಇಡುವುದು ಬೇಡವೆಂದು ಈಗಾಗಲೇ ಹೇಳಿದ್ದೇನೆ, ಅದು ಸರಿಯಲ್ಲ ಎಂದು ತಿಳಿಸಿದ್ದೇನೆ ಎಂದು ಬಿಎಸ್ವೈ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಸಾಮೂಹಿಕ ರಜೆ ಹಾಕಿ ಬಿಬಿಎಂಪಿ ಸಿಬ್ಬಂದಿ ಮುಷ್ಕರ