ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಆಸ್ಟ್ರೇಲಿಯನ್ ಹೈ ಕಮಿಷನರ್: ವಿಡಿಯೋ - CM Siddaramaiah
ಬೆಂಗಳೂರು:ಆಸ್ಟ್ರೇಲಿಯನ್ ಹೈ ಕಮಿಷನರ್ ಬ್ಯಾರಿ ಓ ' ಫಾರೆಲ್ ಅವರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಇತರೆ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧ ಬಲಪಡಿಸುವ ಕುರಿತು ಚರ್ಚಿಸಲಾಯಿತು ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. "ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ದೂತಾವಾಸ ಕಚೇರಿಯನ್ನು ತೆರೆಯುವ ಬಗ್ಗೆ ಮುಖ್ಯಮಂತ್ರಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕವು ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರುವುದರಿಂದ ಆಸ್ಟ್ರೇಲಿಯಾದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಪಾಲುದಾರಿಕೆ ಹೊಂದಲು ರಾಜ್ಯ ಉತ್ಸುಕವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ದಕ್ಷಿಣ ಭಾರತದ ಆಸ್ಟ್ರೇಲಿಯನ್ ಕಾನ್ಸಲ್ ಜನರಲ್ ಸಾರಾ ಕಿರ್ಲೆವ್, ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಆಸ್ಟ್ರೇಲಿಯನ್ ಕಾನ್ಸುಲೆಟ್ ಜನರಲ್‌ನ ನಿಯೋಜಿತ ಡೆಪ್ಯುಟಿ ಕಾನ್ಸಲ್ ಜನರಲ್ ಹ್ಯುಂಗ್ - ಮಿನ್ ಕಿಮ್, ರಾಜ್ಯದ ಐಟಿ ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಇ.ವಿ. ರಮಣ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಇತ್ತೀಚೆಗೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬ್ರಿಸ್ಬೇನ್‌ನಲ್ಲಿ ಇಂಡಿಯನ್ ಕಾನ್ಸುಲೆಟ್ ಕಚೇರಿ ಆರಂಭಿಸುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಬೆಂಗಳೂರಲ್ಲಿ ಹೊಸದಾಗಿ ಕಾನ್ಸುಲೆಟ್ ಆರಂಭಿಸುವುದಾಗಿ ಹೇಳಿದ್ದರು.