ಚಂದ್ರಗುತ್ತಿ ರೇಣುಕಾಂಬ ದೇವಾಲಯಕ್ಕೆ ನುಗ್ಗಿದ ಕಿಡಿಗೇಡಿಗಳು.. ಕಳ್ಳತನಕ್ಕೆ ಯತ್ನ - ಸೊರಬ ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯ
ಶಿವಮೊಗ್ಗ:ರಾಜ್ಯದ ಮಲೆನಾಡು ಭಾಗದ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಸೊರಬ ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯಕ್ಕೆ ಕಿಡಿಗೇಡಿಗಳು ನುಗ್ಗಿ ದೇವಿಯ ಬೆಳ್ಳಿಯ ಮುಖವಾಡವನ್ನು ಕಿತ್ತು ವರಾಂಡದಲ್ಲಿ ಎಸೆದ ಘಟನೆ ಬುಧವಾರ ರಾತ್ರಿ ನಡೆದಿದೆ. ದೇವಾಲಯ ಹಾಗೂ ಗರ್ಭಗುಡಿಯ ಬಾಗಿಲನ್ನು ಮುರಿದಿರುವ ಕಿಡಿಗೇಡಿಗಳು, ದೇವಿಯ ಮೂರ್ತಿಗೂ ಹಾನಿ ಮಾಡಿದ್ದಾರೆ. ಕಳ್ಳತನಕ್ಕೆ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯರ ಮಾಹಿತಿಯಂತೆ, ದೇವಾಲಯದ ಹುಂಡಿಯನ್ನು ಕಳ್ಳರು ಒಡೆದಿಲ್ಲ. ನಿನ್ನೆ ಹುಣ್ಣಿಮೆಯಾಗಿದ್ದರಿಂದ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದಿದ್ದರು. ಹೀಗಾಗಿ, ದೇವಾಲಯದಲ್ಲಿ ಅಧಿಕ ಪ್ರಮಾಣದಲ್ಲಿ ಕಾಣಿಕೆ ಸಲ್ಲಿಕೆ ಆಗುವುದು ಸಾಮಾನ್ಯವಾಗಿದೆ. ಇದು ಹುಂಡಿ ದೋಚುವ ಯತ್ನವೂ ಸಹ ಆಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ, ದೇವಾಲಯದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳು, ಸಿಸಿಟಿವಿ ಕ್ಯಾಮರಾ ಸೇರಿದಂತೆ ಭದ್ರತಾ ವ್ಯವಸ್ಥೆಗಳು ಇಲ್ಲದ ಕಾರಣ ಇಂತಹ ದುಷ್ಕೃತ್ಯ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಹುಸೇನ್ ಸರಕಾವತ್, ಸೊರಬ ಪೊಲೀಸ್ ಠಾಣೆಯ ಸಿಪಿಐ ಎಲ್. ರಾಜಶೇಖರ್, ಪಿಎಸ್ಐ ಮಾಳಪ್ಪ ಚಿಪ್ಪಲಕಟ್ಟಿ, ದೇವಾಲಯ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ತೆರಳಿ ಪರಿಶೀಲಿಸಿದ್ದಾರೆ.