ಆಪ್ ಯುವ ಘಟಕದ ಉಪಾಧ್ಯಕ್ಷನ ಮೇಲೆ ಅಪರಿಚಿತರಿಂದ ಹಲ್ಲೆ ಯತ್ನ: ಪ್ರಕರಣ ದಾಖಲು - ಈಟಿವಿ ಭಾರತ ಕನ್ನಡ
ಬೆಂಗಳೂರು :ಆಮ್ ಆದ್ಮಿ ಪಕ್ಷದ (ಆಪ್) ರಾಜ್ಯ ಯುವಘಟಕದ ಉಪಾಧ್ಯಕ್ಷನ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ತಡರಾತ್ರಿ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರು ಮುಖ್ಯರಸ್ತೆಯಲ್ಲಿ ನಡೆದಿದೆ. ಸ್ನೇಹಿತರ ಜೊತೆ ಯಲಹಂಕದಿಂದ ಕೆ.ಆರ್.ಪುರಂ ಕಡೆ ತೆರಳುತ್ತಿದ್ದ ಆಪ್ ಉಪಾಧ್ಯಕ್ಷ ಗಿರೀಶ್ ಕುಮಾರ್ ನಾಯ್ಡುರನ್ನು ತಡೆದ ಅಪರಿಚಿತ ಯುವಕರು ತಗಾದೆ ತೆಗೆದು ಮದ್ಯದ ಬಾಟಲಿಯಿಂದ ಹಲ್ಲೆಗೆ ಯತ್ನಿಸಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪಾರ್ಥೀಬನ್ ಎಂಬುವವರು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ತಡರಾತ್ರಿ ಕೆ.ಆರ್.ಪುರಂ ಮಾರ್ಗವಾಗಿ ಸಾಗುತ್ತಿದ್ದಾಗ ಗಿರೀಶ್ ನಾಯ್ಡು ಅವರಿದ್ದ ಕಾರನ್ನು ಓವರ್ ಟೇಕ್ ಮಾಡಿದ ಎರಡು ದ್ವಿಚಕ್ರ ವಾಹನಗಳಲ್ಲಿದ್ದ ಪಾನಮತ್ತ ಯುವಕರು, ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ತಮ್ಮ ಕೈಯ್ಯಲ್ಲಿದ್ದ ಬಾಟಲ್ ಅನ್ನು ನೆಲಕ್ಕೆ ಹೊಡೆದು ಗಿರೀಶ್ ಕುಮಾರ್ ಮತ್ತವರ ಜೊತೆಯಲ್ಲಿದ್ದವರ ಮೇಲೆ ಹಲ್ಲೆಗೆ ಯತ್ನಿಸಿದರು. ಜೊತೆಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಗಿರೀಶ್ ಕುಮಾರ್ ನಾಯ್ಡುರ ಸ್ನೇಹಿತ ಪಾರ್ಥೀಬನ್ ನೀಡಿರುವ ದೂರಿನನ್ವಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈ ಹಿಂದೆ ಓರ್ವ ಬಿಲ್ಡರ್ ಸೇರಿದಂತೆ ಬಿಬಿಎಂಪಿ, ಬಿಡಿಎ ಅಧಿಕಾರಿಗಳ ಅಕ್ರಮದ ವಿರುದ್ದ ಗಿರೀಶ್ ನಾಯ್ಡು ಸಾಲು ಸಾಲು ದೂರುಗಳನ್ನು ಸಲ್ಲಿಸಿದ್ದರು. ಇದರಿಂದಾಗಿ ತಮಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಕರೆಗಳು ಬರುತ್ತಿವೆ. ಅಪರಿಚಿತ ವ್ಯಕ್ತಿಗಳು ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂದು ಕೆ.ಆರ್.ಪುರಂ ಠಾಣೆಗೆ ಗಿರೀಶ್ ನಾಯ್ಡು ದೂರು ಸಲ್ಲಿಸಿದ್ದರು.
ಇದನ್ನೂ ಓದಿ :ಕಲಬುರಗಿ: ತುಂಡಾಗಿ ಬಿದ್ದ ವಿದ್ಯುತ್ ಸರ್ವಿಸ್ ವೈರ್ ತಗುಲಿ ತಾಯಿ, ಇಬ್ಬರು ಮಕ್ಕಳ ಸಾವು