ಸಾಲ ತೀರಿಸಲು ಪ್ರಯಾಣಿಕನ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದ ಆಟೋ ಚಾಲಕನ ಬಂಧನ - kannada crime news
ಬೆಂಗಳೂರು: ಪ್ರಯಾಣಿಕರು ಮರೆತುಹೋದ ವಸ್ತುಗಳನ್ನ ಆಟೋ ಚಾಲಕರು ಹಿಂದಿರುಗಿಸಿದ ಅನೇಕ ಘಟನೆಗಳನ್ನು ನೋಡಿದ್ದೀರಿ. ಆದರೆ ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಪ್ರಯಾಣಿಕನ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದ ಆಟೋ ಚಾಲಕನನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಂಗಸ್ವಾಮಿ ಬಂಧಿತ ಆರೋಪಿ.
ಜನವರಿ 24ರಂದು ಗಾಂಧೀ ಬಜಾರ್ನಿಂದಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿರುವ ಕ್ಲಿನಿಕ್ಗೆ ತೆರಳಲು ಆರೋಪಿಯ ಆಟೋ ಹತ್ತಿದ್ದ ಪ್ರಯಾಣಿಕರೊಬ್ಬರು, ತಮ್ಮ ಬ್ಯಾಗ್ ಆಟೋದಲ್ಲೇ ಇರಿಸಿ ಪಾರ್ಕಿಂಗ್ ಸ್ಥಳದಲ್ಲೇ ಸ್ವಲ್ಪ ಸಮಯ ಕಾಯುವಂತೆ ಆಟೋ ಚಾಲಕ ರಂಗಸ್ವಾಮಿಗೆ ಸೂಚಿಸಿದ್ದರು. ಪ್ರಯಾಣಿಕರ ಸೂಚನೆಗೆ ಸಮ್ಮತಿಸಿದ್ದ ಆರೋಪಿ ಅವರ ಬ್ಯಾಗಿನಲ್ಲಿ 1.5 ಲಕ್ಷ ರೂ ಇರುವುದನ್ನು ಗಮನಿಸಿದ್ದ. ಸಾಲ ಮಾಡಿಕೊಂಡಿದ್ದ ಆಟೋ ಚಾಲಕ ಹಣ ನೋಡಿದ ತಕ್ಷಣ ತನ್ನ ಸಾಲ ತೀರಿಸಬಹುದು ಎಂಬ ಆಲೋಚನೆಯಿಂದ ಬ್ಯಾಗ್ ಸಮೇತ ಪರಾರಿಯಾಗಿದ್ದ.
ಕ್ಲಿನಿಕ್ನಿಂದ ಬಂದು ನೋಡಿದಾಗ ಬ್ಯಾಗ್ ಜೊತೆ ಆಟೋ ಚಾಲಕ ಪರಾರಿಯಾಗಿದ್ದನ್ನು ಕಂಡ ಪ್ರಯಾಣಿಕರು ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಮಲ್ಲೇಶ್ವರಂ ಠಾಣಾ ಪೊಲೀಸರು ಆಟೋ ಚಾಲಕ ರಂಗಸ್ವಾಮಿಯನ್ನ ಬಂಧಿಸಿದ್ದು, 1.5 ಲಕ್ಷ ರೂ ನಗದು, ಆಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ:Watch.. ಸಾಯಿ ಮಂದಿರಕ್ಕೆ 7 ಲಕ್ಷ ಮೌಲ್ಯದ ಸಿಂಹಾಸನ ಕಾಣಿಕೆ ನೀಡಿದ ದಂಪತಿ