ಅಯ್ಯಪ್ಪ ಮಾಲಾಧಾರಿಗಳಿಗೆ ತಮ್ಮ ಮನೆಯಲ್ಲಿ ಭೋಜನ ವ್ಯವಸ್ಥೆ ಮಾಡಿದ ಮುಸ್ಲಿಂ ವ್ಯಕ್ತಿ: ವಿಡಿಯೋ - ಅಯ್ಯಪ್ಪ ಮಾಲಾಧಾರಿ ಭೋಜನ
Published : Dec 25, 2023, 9:18 PM IST
ರಾಯಚೂರು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಭೋಜನ ವ್ಯವಸ್ಥೆ ಮಾಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಜಿಲ್ಲೆಯ ಕವಿತಾಳ ಪಟ್ಟಣದ ಮುಖಂಡ ಬಿ.ಎ.ಕರೀಂ ಸಾಬ್ ಎಂಬವರು ತಮ್ಮ ಮನೆಯಲ್ಲಿ ಮಾಲಾಧಾರಿಗಳಿಗೆ ಭೋಜನ ಬಡಿಸಿದರು.
ಕವಿತಾಳ ಪಟ್ಟಣ ಹಾಗೂ ಪಾಮನಕಲ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ 58 ಮಾಲಾಧಾರಿಗಳು ಭೋಜನ ಸ್ವೀಕರಿಸಿದರು. ಕರೀಂ ಸಾಬ್ ಎರಡನೇ ಬಾರಿಗೆ ಮಾಲಾಧಾರಿಗಳಿಗೆ ಭೋಜನ ವ್ಯವಸ್ಥೆ ಮಾಡಿದ್ದಾರೆ.
ಈ ಬಗ್ಗೆ ಕರೀಂ ಸಾಬ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, "ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿಸಿರುವುದು ಇದು ಎರಡನೇ ಬಾರಿ. ಮನೆಯಲ್ಲೇ ಅಡುಗೆ ಮಾಡಲಾಗುತ್ತದೆ. ನಮ್ಮ ಧರ್ಮವನ್ನು ಪ್ರೀತಿಸುವ ಜೊತೆಗೆ ಬೇರೆ ಧರ್ಮವನ್ನೂ ಪ್ರೀತಿಸಿ ಗೌರವಿಸಬೇಕು. ಆ ನಿಟ್ಟಿನಲ್ಲಿ ಈ ಕಾರ್ಯ ಮಾಡುತ್ತಿದ್ದೇವೆ. ಹಾಗೆಯೇ ಈ ಭಾಗದಲ್ಲಿ ಸೌಹಾರ್ದತೆ ಸಾರುವ ವಿವಿಧ ಕಾರ್ಯಕ್ರಮಗಳನ್ನೂ ಸಹ ಮಾಡುತ್ತಿದ್ದೇವೆ" ಎಂದರು.
ಸಮಾಜದಲ್ಲಿ ಜಾತಿ-ಜಾತಿಗಳ ನಡುವೆ ಗಲಾಟೆಗಳಾಗುವುದು ಅಲ್ಲಲ್ಲಿ ಕೇಳಿ ಬರುತ್ತವೆ. ಇದರ ನಡುವೆಯೇ ಕವಿತಾಳ ಪಟ್ಟಣದಲ್ಲಿ ಹಿಂದೂ-ಮುಸ್ಲಿಮರ ನಡುವೆ ಭಾವ್ಯಕ್ಯತೆಯ ಸಂದೇಶ ಸಾರಿರುವುದು ವಿಶೇಷವಾಗಿದೆ.
ಇದನ್ನೂ ಓದಿ:ಶಿವಮೊಗ್ಗ : ಮೊಬೈಲ್ ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ಮಾಡಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕ