ಮಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಅಮಿತ್ ಶಾ.. - etv bharat kannada
ಮಂಗಳೂರು:ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಚಾಣಾಕ್ಯ ಗೃಹ ಸಚಿವ ಅಮಿತ್ ಶಾ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಬೈಂದೂರಿನಿಂದ ಮಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅಮಿತ್ ಶಾ ಮೇರಿಹಿಲ್ ಹೆಲಿಪ್ಯಾಡ್ ನಲ್ಲಿ ಬಂದಿಳಿದರು. ಸಂಜೆ 6.30ಕ್ಕೆ ರೋಡ್ ಶೋ ಪ್ರಾರಂಭವಾಯಿತು.
ಪುರಭವನದಿಂದ ನವಭಾರತ ಸರ್ಕಲ್ವರೆಗೆ ನಡೆದ ಸುಮಾರು ಅರ್ಧ ಕಿ.ಮೀ. ವರೆಗಿನ ರೋಡ್ ಶೋದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದ ಸಾವಿರಾರು ಮಂದಿಯತ್ತ ಕೈ ಬೀಸಿದ ಅಮಿತ್ ಶಾ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪುರಭವನದಿಂದ ಹೊರಟ ರೋಡ್ ಶೋ ಕ್ಲಾಕ್ ಟವರ್ ನತ್ತ ಸಾಗಿ ಹಂಪನಕಟ್ಟೆ ವೃತ್ತದ ಮೂಲಕ ಆಗಮಿಸಿ ಕೆ.ಎಸ್. ರಾವ್ ರಸ್ತೆಗೆ ಆಗಮಿಸಿತು. ಅಲ್ಲಿಂದ ನವಭಾರತ ಸರ್ಕಲ್ ನತ್ತ ತಲುಪಿತು.
ರೋಡ್ ಶೋದೊಂದಿಗೆ ಹುಲಿವೇಷ, ನಾಸಿಕ್ ಬ್ಯಾಂಡ್, ಚಂಡೆ, ಕಲ್ಲಡ್ಕ ಗೊಂಬೆ ಮೆರುಗು ನೀಡಿತು. ಬಿಜೆಪಿ ಬಾವುಟದೊಂದಿಗೆ ತುಳುನಾಡ ಧ್ವಜವೂ ಕಾಣಿಸಿಕೊಂಡಿತು. ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ರೋಡ್ ಶೋನಲ್ಲಿ ಕೇಸರಿ ಶಾಲು ಬೀಸಿ, ಘೋಷಣೆಗಳನ್ನು ಹಾಕುತ್ತ ಸಂಭ್ರಮಪಟ್ಟರು. ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಫೋಟೋಗಳು ನಗರದಲ್ಲಿ ರಾರಾಜಿಸುತ್ತಿದ್ದವು. ಇನ್ನು'ವೇದಣ್ಣನಿಗೆ ಜೈಕಾರ ಹಾಕಿ' ಎಂಬ ಹಾಡಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ರೋಡ್ ಶೋನಲ್ಲಿ ಅಮಿತ್ ಶಾ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಭಾಗಿಯಾದರು. ಅಮಿತ್ ಶಾ ಅವರು ರೋಡ್ ಶೋ ನಲ್ಲಿ ಭಾಷಣ ಮಾಡದೆ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾದ ಸಭೆಗೆ ತೆರಳಿದರು.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಮೋದಿ ಮೋಡಿ : ರೋಡ್ ಶೋ ವೇಳೆ ನಮೋಗೆ ಹೂವಿನ ಸುರಿಮಳೆ