ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಹಣ ಪಡೆದ ಆರೋಪ.. ಸಂಡೂರಲ್ಲಿ ಎಫ್ಐಆರ್ ದಾಖಲು - ಗ್ರಾಮ ಒನ್ ಕೇಂದ್ರದಲ್ಲಿ ಹಣ ವಸೂಲಿ
ಬಳ್ಳಾರಿ :ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಗ್ರಾಮ ಒನ್ ಕೇಂದ್ರದಲ್ಲಿ ಗೃಹಿಣಿಯರು ಜಮಾಯಿಸುತ್ತಿದ್ದಾರೆ. ಆದರೆ, ಯೋಜನೆಯ ನೋಂದಣಿಗೆ ಜಿಲ್ಲೆಯ ಸಂಡೂರು ತಾಲೂಕಿನ ಅಂಕಮ್ಮನಹಾಳ ಗ್ರಾಮ ಒನ್ ಕೇಂದ್ರದ ಕಂಪ್ಯೂಟರ್ ಆಪರೇಟರ್ ದೇವರಾಜ್ ಅರ್ಜಿದಾರರಿಂದ ಹಣ ಪಡೆದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಪರಿಣಾಮ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಂಕಮ್ಮನಹಾಳ್ ಗ್ರಾಮ ಆಡಳಿತಾಧಿಕಾರಿ ಬಿ. ಕೊಟ್ರಪ್ಪ ಹಾಗೂ ಚೋರನೂರು ಕಂದಾಯ ನಿರೀಕ್ಷಕ ಬಿ ವೀರೇಂದ್ರ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಅರ್ಜಿದಾರರಿಂದ ತಲಾ 50 ಪಡೆಯುತ್ತಿರುವುದನ್ನು ಖುದ್ದು ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವರಾಜ್ ವಿರುದ್ಧ ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ವಿರುದ್ಧ ಕಲಂ 406 ಹಾಗೂ 420 ಐಪಿಸಿ ಸೆಕ್ಷನ್‌ನಡಿ ಪ್ರಕರಣ ದಾಖಲಾಗಿದೆ. ರಾಜ್ಯ ಸರ್ಕಾರ ಕಡು ಬಡವರಿಗಾಗಿ ಈ ಯೋಜನೆ ತಂದಿದ್ದು, ಅವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಿದರೆ, ಇತ್ತ ಹಲವು ಗ್ರಾಮ ಒನ್ ಕೇಂದ್ರದಲ್ಲಿ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಫಲಾನುಭವಿಗಳ ನೋಂದಣಿಗೆ ಸಾರ್ವಜನಿಕರಿಂದ ಹಣ ವಸೂಲಿ... ವ್ಯಕ್ತಿಯ ವಿರುದ್ಧ ದೂರು